ಸಂಘ ಮನೆಯಂಗಳದಲ್ಲಿ ನೀಡಿದ ಗೌರವ ಹೃದಯಂಗಮವಾದುದು : ನಿರ್ಮಲಾ ಶೆಟ್ಟಿ

ಅಂಕೋಲಾ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಅಂಕೋಲಾದವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಟಕಣಿಯಿಂದ ವಯೋನಿವೃತ್ತಿಯನ್ನು ಹೊಂದಿದ ನಿರ್ಮಲಾ ಡಿ ಶೆಟ್ಟಿಯವರನ್ನು ಅವರ ಮನೆಯಂಗಳದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಪ್ರೀತಿಯ ಪ್ರೀತಿಯ ಸನ್ಮಾನ ಗೌರವ ಸ್ವೀಕರಿಸಿ ಮಾತನಾಡಿದ ನಿರ್ಮಲಾ ಡಿ ಶೆಟ್ಟಿಯವರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅತ್ಯಂತ ಕ್ರಿಯಾಶೀಲವಾಗಿ ಕೆಲಸವನ್ನು ಮಾಡುತ್ತಿದೆ. ಶಿಕ್ಷಕರಿಗೆ ಅವಶ್ಯವಾದ ಎಲ್ಲ ಮಾಹಿತಿಗಳನ್ನು ನೀಡುತ್ತ, ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ತೀವ್ರವಾದ ಸ್ಪಂದನೆಯನ್ನು ನೀಡುತ್ತಿದೆ. ವಯೋನಿವೃತ್ತಿ ಹೊಂದಿದ ಈ ಸುಸಂದರ್ಭದಲ್ಲಿ ನನ್ನ ಮನೆಗೆ ಬಂದು ನನ್ನನ್ನು ಆತ್ಮೀಯವಾಗಿ ಗೌರವಿಸಿರುವುದು ನನ್ನ ಸಂಘದ ಕಾರ್ಯ ಹೃದಯಂಗಮವಾದುದು ಎಂದರು.

ವಯೋನಿವೃತ್ತ ಶಿಕ್ಷಕಿಯನ್ನು ಸನ್ಮಾನಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಜಿ ನಾಯಕ ಹೊಸ್ಕೇರಿ ಮಾತನಾಡಿ , ಸುಮಾರು ನಾಲ್ಕು ದಶಕಗಳಕಾಲ ಅತ್ಯಂತ ಕ್ರಿಯಾಶೀಲವಾಗಿ ಜನ ಮೆಚ್ಚುಗೆ ಹಾಗೂ ವಿದ್ಯಾರ್ಥಿಗಳ ಮನತಟ್ಟುವ ಹಾಗೆ ಶಿಕ್ಷಣ ಸೇವೆಯನ್ನು ಸಲ್ಲಿಸಿದ ರೀತಿ ಈ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದದು.ಅತ್ಯಂತ ದಕ್ಷತೆಯಿಂದ ಶಿಕ್ಷಕರಿಗೆ ಮಾದರಿಯಾಗುವಂತೆ ಕಾರ್ಯವನ್ನು ಅವರು ನಿರ್ವಹಿಸಿದ್ದಾರೆ.

ನಿವೃತ್ತಿಯ ನಂತರವೂ ಸಹ ತಮ್ಮ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಅತ್ಯಂತ ಚಟುವಟಿಕೆಯುಕ್ತವಾಗಿ ಜೀವನವನ್ನು ನಡೆಸಬೇಕು.ಸಂಘ ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಅವರನ್ನು ಸನ್ಮಾನಿಸಿದೆ ಎಂದರು.ವಿಶ್ರಾಂತ ಶಿಕ್ಷಕ ಕೆ ಎಂ ಗೌಡ,ಶಿಕ್ಷಕ ಶ್ರೀನಿವಾಸ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ದಿವಾಕರ ದೇವನ ಮನೆ, ಸಂಜೀವ ಆರ್ ನಾಯಕ,ವೆಂಕಮ್ಮ ಬಿ ನಾಯಕ, ಆನಂದು ವಿ ನಾಯ್ಕ. ಸಮೂಹ ಸಂಪನ್ಮೂಲ ವ್ಯಕ್ತಿ ಸಾತು ಗೌಡ, ಮುಖ್ಯಾಧ್ಯಾಪಕ ವೇಲಾಯುದ ನಾಯರ ಮುಂತಾದವರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಎಚ್ ನಾಯಕ ಸ್ವಾಗತಿಸಿ, ನಿರ್ವಹಿಸಿದರು. ಸಂಘದ ಉಪಾಧ್ಯಕ್ಷೆ ಭಾರತಿ ಬಿ ನಾಯಕ ಅಭಿನಂದನಾ ಮಾತುಗಳ ಮೂಲಕ ವಂದಿಸಿದರು. ನಾಗೇಶ ಶೆಟ್ಟಿ,ನಿಖಿಲ್ ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version