ಪ್ರತಿಷ್ಠಿತ ಪಿ. ಎಲ್ ಡಿ ಬ್ಯಾಂಕ್ ಚುನಾವಣೆ : 12 ಸ್ಥಾನ ಅವಿರೋಧವಾದರೂ 1 ಸ್ಥಾನಕ್ಕೆ ಮಾತ್ರ ನಡೆಯುವಂತಾದ ಚುನಾವಣೆ

ಸಮಾನ ಮತದ ನಡುವೆ ಚೀಟಿ ತಂದ ಅದೃಷ್ಟ

ಅಂಕೋಲಾ : ಪಿ ಎಲ್ ಡಿ ಎಂದೇ ಕರೆಯಿಸಿಕೊಳ್ಳುವ ಅಂಕೋಲಾ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಅಂಕೋಲಾ ಇದರ ವಾರ್ಡ್ ನಂ 2 , ಸಾಲಗಾರ ಸಾಮಾನ್ಯ ಮತದಾರ ಕ್ಷೇತ್ರ ಅವರ್ಸಾದಿಂದ ಚುನಾವಣೆ ಏರ್ಪಟ್ಟು ಭಾರೀ ಪೈಪೋಟಿ ಕಂಡುಬಂದಿತ್ತು. ಹಳೆಯ ಹುಲಿಗಳ ತೆರೆ ಮರೆಯ ಕಸರತ್ತಿನ ನಡುವೆ ಯುವ ಮುಂದಾಳು ವಿನೋದ ರಾಮಚಂದ್ರ ಗಾಂವಕರ ಸಮಬಲದ ಹೋರಾಟ ನಡೆಸಿ , ಅಂತಿಮವಾಗಿ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಅದೃಷ್ಟದ ಗೆಲುವಿನ ನಗೆ ಬೀರಿದ್ದಾರೆ.

ಒಟ್ಟೂ 15 ನಿರ್ದೇಶಕರ ಸ್ಥಾನ ಬಲದ ಪಿ ಎಲ್ ಡಿ ಬ್ಯಾಂಕಿನ ನೂತನ ಸಾಲಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ,ಹಿಂದುಳಿದ ಬ ಅಭ್ಯರ್ಥಿಗಳಿಗೆ ಮೀಸಲಾದ ಸ್ಥಾನ ಅಭ್ಯರ್ಥಿಗಳಿರದೇ ,ಖಾಲಿಯಾಗಿಯೇ ಇದೆ ಎನ್ನಲಾಗಿದೆ. ಉಳಿದ 13 ಸ್ಥಾನಗಳ ಪೈಕಿ 12 ನಿರ್ದೇಶಕರ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು ,ಬಹುತೇಕ ಹಳೆಯ ಮುಖಗಳೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಅವರ್ಸಾ ಕ್ಷೇತ್ರಕ್ಕೆ ಮಾತ್ರ ಮತದಾನ ನಡೆಯುವಂತಾಗಿ , ಡಿ 22 ರಂದು ಪಟ್ಟಣದ ಜೈ ಹಿಂದ್ ಹೈ ಸ್ಕೂಲ್ ನಲ್ಲಿ ಚುನಾವಣೆ ನಡೆದಿತ್ತು.

ಈ ಹಿಂದೆ ನಿರ್ದೇಶಕರಾಗಿದ್ದ ಗಣಪತಿ ನೀಲಾ ನಾಯ್ಕ ಈ ಬಾರಿಯ ಹೊಸ ಮುಖ ವಿನೋದ ರಾಮಚಂದ್ರ ನಾಯಕ ಇವರಿಂದ ತೀವ್ರ ಪೈಪೋಟಿ ಎದುರಿಸುವಂಥಾಗಿ , ಮತದಾನ ಪ್ರಕ್ರಿಯೆಯಲ್ಲಿ ಇಬ್ಬರಿಗೂ ಸಮಾನ ಮತಗಳು ದೊರೆತು , ಕೊನೆಗೆ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ವಿನೋದ ಗಾಂವಕರ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಯಿತು. ಕ್ರೀಡೆ ಧಾರ್ಮಿಕ ಮತ್ತಿತರ ಕಾರ್ಯಗಳಲ್ಲಿ ಯುವ ಮುಂದಾಳು ವಾಗಿ ಗುರುತಿಸಿಕೊಂಡಿರುವ ವಿನೋದ ಗಾಂವಕರ , ಇತ್ತೀಚೆಗೆ ನಡೆದಿದ್ದ ಹಾರವಾಡ ವಿ.ಎಸ್ ಎಸ್ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಲ್ಲದೇ , ಈಗ ಪ್ರತಿಷ್ಠಿತ ಪಿ. ಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ವಿನೋದ ಗಾಂವಕರ ಗೆಲುವಿಗೆ ಹರ್ಷ ವ್ಯಕ್ತಪಡಿಸಿ ,ಗೆಳೆಯರು ಆಪ್ತರು ,ಹಾರ ಹಾಕಿ ಅಭಿನಂದಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version