Important
Trending

ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿದ್ದ ವಿವಾಹಿತ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಅಂಕೋಲಾ: ಅಪ್ರಾಪ್ತ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

2022 ರಲ್ಲಿ ಅಂಕೋಲಾ ತಾಲೂಕಿನ ಅಗಸೂರು ಜನತಾ ಕಾಲನಿ ನಿವಾಸಿ ಅಜೀತ ಎಚ್ ಪೆಡ್ನೇಕರ್ (29) ಎಂಬ ವಿವಾಹಿತ ವ್ಯಕ್ತಿ , 17 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ತಾಯಿ ಕರೆಯುವುದಾಗಿ ತನ್ನ ಮನೆಗೆ ಕರೆದುಕೊಂಡು ಅತ್ಯಾಚಾರ ಎಸಗಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಬಾಲಕಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಅಂದಿನ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರು ಆರೋಪಿತನನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1ಲಕ್ಷ ರೂಪಾಯಿ ದಂಡ ಶಿಕ್ಷೆ ಪ್ರಕಟಿಸಿದ್ದು ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಜೈಲು ವಾಸ ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದಿಸಿದ್ದರು.

ಅಂದಿನ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪ್ರಕರಣದ ಮೇಲುಸ್ತುವಾರಿ ಅಧಿಕಾರಿ ಈಗಿನ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಎ.ಎಸ್. ಐ ಮಹಾಬಲೇಶ್ವರ ಗಡೇರ,ಸಹಾಯಕ ಗುರುರಾಜ ನಾಯ್ಕ ಪ್ರಕರಣದ ಸಾಕ್ಷಿಯಾಗಿ ಸಹಕರಿಸಿದ್ದರು. ಒಟ್ಟಿನಲ್ಲಿ ವಿಶೇಷ ಪ್ರಕರಣ ತ್ವರಿತವಾಗಿ ವಿಚಾರಣೆಯಾಗಿ ತೀರ್ಪು ಪ್ರಕಟವಾಗುವ ಮೂಲಕ ನೊಂದ ಕುಟುಂಬಕ್ಕೆ ಕೊಂಚ ಸಮಾಧಾನ ಮತ್ತು ನೆಮ್ಮದಿಯ ನ್ಯಾಯ ನೀಡಿದರೆ ,ನೀಚ ಕೃತ್ಯ ಮಾಡಲು ಹೇಸದವರಿಗೆ ಎಚ್ಚರಿಕೆಯ ಸಂದೇಶ ನೀಡಿದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button