ದಾರಿಗೆ ಅಡ್ಡಲಾಗಿ ಬಂದ ನಾಯಿ ತಪ್ಪಿಸಲು ಹೋಗಿ ರಸ್ತೆ ಮೇಲೆ ಬಿದ್ದ ಬೈಕ್ ಸವಾರ : ಚಿಕಿತ್ಸೆಗೆ ಸ್ವಂದಿಸದೇ ಮೃತ

ಅಂಕೋಲಾ : ದಾರಿಗೆ ಅಡ್ಡಲಾಗಿ ಬಂದಿತ್ತೆನ್ನವಾದ ನಾಯಿಯನ್ನು ತಪ್ಪಿಸಲು ಹೋದ ಬೈಕ್ ಸವಾರ , ತನ್ನ ನಿಯಂತ್ರಣ ಕಳೆದುಕೊಂಡು , ಬೈಕ್ ಸಮೇತ ರಸ್ತೆ ಮೇಲೆ ಬಿದ್ದು , ತಲೆಗೆ ಹಾಗೂ ಮೈಮೇಲೆ ಗಂಭೀರ ಗಾಯಗೊಂಡವ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ವಂದಿಸಿದೇ ಮೃತ ಪಟ್ಟ ಬಗ್ಗೆ ಅಂಕೋಲಾ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರ ಗ್ರಾಮದ ನಿವಾಸಿ ವಿನೋದ ಪೊಕ್ಕಾ ನಾಯ್ಕ (38) ಮೃತ ದುರ್ದೈವಿಯಾಗಿದ್ದಾನೆ.

ಈತನು ರಾತ್ರಿ ಅಲಗೇರಿಯಲ್ಲಿರುವ ತನ್ನ ಅಜ್ಜಿ ಮನೆಯಿಂದ ಅಡ್ಲೂರಿನಲ್ಲಿರುವ ತನ್ನ ಮೂಲ ಮನೆಗೆ ಅಲಗೇರಿ – ಬಾಳೆಗುಳಿ ಮಾರ್ಗವಾಗಿ ಕೆ ಎ 30 ವಿ 1702 ನೊಂದಣಿ ಸಂಖ್ಯೆಯ ಯಮಹಾ ಎಫ್ ಝಡ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಅಲಗೇರಿಯ ಸ್ಥಶಾನದ ಎದುರಿನ ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ನಂತರ ಗಂಭೀರ ಗಾಯ ನೋವು ಗೊಂಡಿದ್ದ ಆತನನ್ನು ಅಂಕೋಲಾ ತಾಲೂಕಾ ಸರ್ಕಾರಿ ಆಸ್ಪತ್ರಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಲಾಗಿತ್ತು.

ಅಲ್ಲಿಂದ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಾಗ ಆತನನ್ನು ಪರೀಕ್ಷಿಸಿದ ವೈದ್ಯರು ಗಾಯಾಳು ವಿನೋದ ಬದುಕುಳಿಯುವುದು ಕಷ್ಟ ಸಾಧ್ಯ ಎಂದು ತಿಳಿಸಿದ್ದರಿಂದ , ಆತನನ್ನು ಉಡುಪಿಯಿಂದ ಅಂಕೋಲಾ ತಾಲೂಕಾ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ದಿ 20 ರಂದು ಬೆಳಿಗ್ಗೆ 11.15 ರ ಸುಮಾರಿಗೆ ಆತ ಮೃತಪಟ್ಟಿರುವುದನ್ನು ಸ್ಥಳೀಯ ವೈದ್ಯಾಧಿಕಾರಿಗಳು ಖಚಿತ ಪಡಿಸಿದ್ದರು. ಈ ಕುರಿತು ಮೃತನ ಸಹೋದರ ಪೊಲೀಸ್ ದೂರು ನೀಡಿದ್ದು , ಪಿ ಎಸ್ ಐ ಸುನೀಲ ಹುಲ್ಲೊಳ್ಳಿ , ಸಿಬ್ಬಂದಿ ಸಲೀಂ ಮೊಕಾಶಿ ಮತ್ತಿತರರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ತಾಲೂಕಾ ಆಸ್ಪತ್ರೆ ಶವಾಗಾರದಿಂದ ಅಡ್ಲೂರಿಗೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಹಾಗೂ ಮೃತನ ಕುಟುಂಬಸ್ಥರು ಮತ್ತಿತರರು ಸಹಕರಿಸಿದರು. ವೃತ್ತಿಯಿಂದ ಚಾಲಕ ನಾಗಿದ್ದ ವಿನೋದ ನಾಯ್ಕ ಗೆಳೆಯರ ಬಳಗ ಸೇರಿದಂತೆ , ಊರಿನ ಹಾಗೂ ಇತರೆಡೆಯ ನೂರಾರು ಜನರ ಪ್ರೀತಿ ವಿಶ್ವಾಸ ಗಳಿಸಿದ್ದ. ಅಪಘಾತ ಗೊಂಡ ದಿನ ಬೈಕ್ ಮೇಲೆ ಮನೆಗೆ ಹೋಗುವ ಪೂರ್ವ ಮನೆಗೆ ಬೇಕಾದ ಕಿರಾಣಿ ಹಾಗೂ ದಿನಸಿ ಸಾಮಾಗ್ರಿ ಖರೀದಿಸಿದ್ದ ಎನ್ನಲಾಗಿದ್ದು ಅಪಘಾತ ಸ್ಥಳದಲ್ಲಿ ಅದು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತಂತೆ.

ಈತನ ಮೃತ ದೇಹ ಮನೆಗೆ ತರುತ್ತಿದ್ದಂತೆ ತಂದೆ -ತಾಯಿ , ಸಹೋದರ , ಹೆಂಡತಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟು ವಂತಿತ್ತು.ಕಳೆದ 2 ವರ್ಷದ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ ಈತ 8-9 ತಿಂಗಳ ಮುದ್ದಾದ ಪುಟಾಣಿ ಮಗುವಿಗೆ ತಂದೆಯಾಗಿದ್ದು , ಆತನನ್ನು ಕಳೆದುಕೊಂಡ ನೊಂದ ಬಡ ಕುಟುಂಬಕ್ಕೆ ಯೋಗ್ಯ ಪರಿಹಾರ ಹಾಗೂ ಪ್ರೀತಿಯ ಸಾಂತ್ವನ ದೊರೆಯಬೇಕಿದೆ. ಸ್ಥಳೀಯರು ಸೇರಿ ನೂರಾರು ಜನ ಮೃತನ ಅಂತಿಮ ದರ್ಶನ ಪಡೆದರು. ಅಡ್ಲೂರಿನಲ್ಲಿ ಮೃತನ ಅಂತ್ಯಕ್ರಿಯೆ ನೆರವೇರಿಸಲಾಯಿತು.ವಿನೋದ ನಾಯ್ಕ ಅಕಾಲಿಕ ನಿಧನಕ್ಕೆ ತಾ ಪಂ ಮಾಜಿ ಅಧ್ಯಕ್ಷ ವಿನೋದ್ ಗಾಂವಕರ ಅಲಗೇರಿ, ಸೇರಿದಂತೆ ಕೆಲ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version