
ಭಟ್ಕಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಟ್ಕಳ ತಾಲೂಕಿನ ಗುಳ್ಮಿಯ ರೈಲ್ವೆ ನಿಲ್ದಾಣ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಗಟಾರ ನೀರು ರಸ್ತೆಯ ಮೇಲೆ ಉಕ್ಕಿ ಟನ್ ಗಟ್ಟಲೆ ಕಸ ರಸ್ತೆಯ ಮೇಲೆ ಹರಡಿಕೊಂಡಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಗಟಾರ ಕುಸಿದು ಬಿದ್ದಿದ್ದು ಹಾಗೂ ಗುಡ್ಡದ ಮೇಲಿನ ಮನೆಗಳಿಂದ ಕಸಗಳನ್ನು ನೇರವಾಗಿ ಗಟಾರಕ್ಕೆ ಹಾಕುವುದರಿಂದ ಈ ಅವಾಂತರ ಸಂಭವಿಸಿದೆ.
ಮುಟ್ಟಳ್ಳಿ ಗ್ರಾಮ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಗೆ ಒಳಪಡುವ ಸ್ಥಳದಲ್ಲಿ ಅನೇಕ ವರ್ಷಗಳ ಹಿಂದೆ ಆಗಿನ ಮನೆಗಳು ಜನಸಂಖ್ಯೆಗೆ ತಕ್ಕಂತೆ ಗಟಾರದ ನೀರು ರಸ್ತೆ ದಾಟಲು ಚಿಕ್ಕದಾದ ಸಿಮೆಂಟ್ ಪೈಪ್ ಅಳವಡಿಸಿದ್ದು ಇದೀಗ ಈ ವ್ಯಾಪ್ತಿಯಲ್ಲಿ ಮನೆಗಳು ಹಾಗೂ ಜನಸಂಖ್ಯೆ ಹೆಚ್ಚಾಗಿರುವುದರಿಂದ ಜೋರಾಗಿ ಮಳೆಯಾದಾಗ ದೊಡ್ಡ ಕಾಲುವೆಯಿಂದ ಹರಿದು ಬರುವ ನೀರು ಪೈಪ್ ನ ಒಳಗಡೆ ನುಸುಳದೆ ಪೈಪ್ ನ ಮೇಲಿಂದ ರಸ್ತೆಗೆ ಹಾಯುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸ್ಥಳಿಯರಿಗೆ ಹಾಗೂ ರೈಲ್ವೆ ನಿಲ್ದಾಣಕ್ಕೆ ಹೊರಡುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಗಟಾರ ದುರಸ್ಥಿ ಆಗದೆ ಇರುವುದರಿಂದ ಜೋರಾಗಿ ಹರಿಯುವ ಮಳೆ ನೀರು ಸ್ಥಳಿಯ ಅಂಗಡಿ, ಮನೆಗೂ ಹಾನಿಯನ್ನುಂಟು ಮಾಡುತ್ತಿದೆ. ಆದಷ್ಟು ಬೇಗ ಗಟಾರ ನಿರ್ಮಾಣ ಕಾರ್ಯ ನಡೆಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ