- ಗುಣಮುಖ 16 : ಸಕ್ರಿಯ 96.
- ಆರಂಭಗೊಂಡ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ 95 ವಿದ್ಯಾರ್ಥಿಗಳು ಹಾಜರ್
- ಎಡಬಿಡದೇ ಸುರಿಯುತ್ತಿರುವ ಮಳೆ
- ಒಂದೇ ದಿನಕ್ಕೆ 220ಮಿ.ಮೀ.ದಾಖಲು
ಅಂಕೋಲಾ : ತಾಲೂಕಿನಲ್ಲಿ ಸೋಮವಾರ ಒಟ್ಟೂ 9 ಹೊಸ ಕೋವಿಡ್ ಕೇಸ್ಗಳು ಪತ್ತೆಯಾಗಿದೆ. ಸೋಂಕು ಮುಕ್ತರಾದ 16 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್ನಲ್ಲಿರುವ 52 ಮಂದಿ ಸಹಿತ ಒಟ್ಟೂ 96 ಪ್ರಕರಣಗಳು ಸಕ್ರಿಯವಾಗಿದೆ.
ತಾಲೂಕಿನ ಅಜ್ಜಿಕಟ್ಟಾ, ಬಳಲೆ, ಹಿಲ್ಲೂರು, ತೆಂಕಣಕೇರಿ, ಅವರ್ಸಾ-ಹಾರವಾಡಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸಾರಿಗೆ ಸಿಬ್ಬಂದಿಯೋರ್ವರಲ್ಲಿಯೂ ಸೋಂಕಿನ ಲಕ್ಷಣಗಳು ಪತ್ತೆಯಾಗಿದೆ.
ಗಂಟಲುದ್ರವ ಪರೀಕ್ಷೆ :
ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಇಂದು ಒಟ್ಟೂ 86 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಲಾಗಿದೆ. ತಾಲೂಕಾ ಸರ್ಕಾರಿ ಆಸ್ಪತ್ರೆ ಮತ್ತು ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ರ್ಯಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ಸೋಂಕು ಪತ್ತೆ ವಿಧಾನವನ್ನು ಶೀಘ್ರವಾಗಿ ಮಾಡಲಾಗುತ್ತಿದೆ.
ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಕಾರವಾರದ ಕ್ರಿಮ್ಸ್ ಪ್ರಯೋಗಾಲಯದಲ್ಲಿ ನಡೆಸಲಾಗಿತ್ತಿತ್ತು. ರವಿವಾರ ಪ್ರಯೋಗಾಲಯದ ವಿಜ್ಞಾನಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಸೋಂಕು ನಿವಾರಕ ಸಿಂಪಡಣೆ ಉದ್ದೇಶದಿಂದ ಪ್ರಯೋಗಾಲಯವನ್ನು ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆವರೆಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ
ಇಂದಿನಿಂದ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ಆರಂಭಗೊಂಡಿದ್ದು, ಪ್ರಥಮ ದಿನದ ಗಣಿತ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 103 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿಗಳು ಹಾಜರಾಗಿ ಪುನರಾವರ್ತಿತ ಪರೀಕ್ಷೆ ಬರೆದರು. ಪಿ.ಎಮ್.ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು ಸರ್ಕಾರ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಯಿತು.
ತಾಲೂಕಿನಲ್ಲಿ ಭಾರಿ ಮಳೆ: ಹಲವೆಡೆ ಅನಾಹುತ
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ, ತಾಲೂಕಿನಲ್ಲಿಯೂ ಮಳೆಯ ಅಬ್ಬರ ಜೋರಾಗಿದೆ. ಅವ್ಯಾಹತವಾಗಿ ಸುರಿಯುತ್ತಿರುವ ಮಳೆ ಅಲ್ಲಲ್ಲಿ ಕೆಲ ಅವಾಂತರಗಳನ್ನು ಸೃಷ್ಠಿಸುತ್ತಿದೆ.
ರವಿವಾರ ಬೆಳಿಗ್ಗೆಯಿಂದ ಸೋಮವಾರ ಬೆಳಗಿನ 24 ಗಂಟೆ ಅವಧಿಯಲ್ಲಿ ತಾಲೂಕಿನಲ್ಲಿ 220 ಮಿ.ಮೀ ಮಳೆಯಾದ ಬಗ್ಗೆ ಮಾಹಿತಿ ಇದೆ.
ಪಟ್ಟಣ ವ್ಯಾಪ್ತಿಯ ಮನೆಯೊಂದರ ಗೋಡೆ ಕುಸಿದು ಭಾಗಶಃ ಹಾನಿಯಾಗಿದ್ದರೆ, ಶಿರಕುಳಿಯ 3 ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಬಗ್ಗೆ ಹಾಗೂ ಪೂಜಗೇರಿಯಲ್ಲಿ ಕೊಟ್ಟಿಗೆಯೊಂದಕ್ಕೆ ಭಾಗಶಃ ಹಾನಿಯಾದ ಬಗ್ಗೆ ಕಂದಾಯ ಇಲಾಖೆಯವರು ಹಾನಿ ಪರಿಶೀಲಿಸಿ, ಒಟ್ಟಾರೆಯಾಗಿ 65.000 ಹಾನಿ ಅಂದಾಜಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ