ಅತಂತ್ರ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷೇತರರ ಪ್ರಾಬಲ್ಯ: 13 ಮ್ಯಾಜಿಕ್ ನಂ.
ಶಾಸಕಿಗೆ ಛಲ-ಸೈಲ್‌ಗೆ ಬಲ? : ಗದ್ದುಗೆ-ಗುದ್ದಾಟದಲ್ಲಿ ಗೆಲುವು ಯಾರದು?
ಅಂಕೋಲಾ : ಮೀಸಲಾತಿ ವಿವಾಧದಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಗೊಂದಲ ಬಗೆಹರಿದಿದ್ದು, ಹೊಸ ಮೀಸಲಾತಿ ಪ್ರಕಟಗೊಂಡಿದೆ. ಇದೇ ವೇಳೆ ತಾಲೂಕಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಬoಧಿಸಿದoತೆ 9ನೇ ಅವಧಿಗೆ ಚುನಾವಣೆ ನಡೆಸಲು ಅಕ್ಟೋಬರ್ 21ರಂದು ದಿನಾಂಕ ನಿಗದಿಗೊಳಿಸಿ, ಚುನಾವಣಾಧಿಕಾರಿ ತಹಶೀಲ್ದಾರ್ ಉದಯ ಕುಂಬಾರ, ಚುನಾವಣೆ ಸಭೆಯ ತಿಳುವಳಿಕೆ ಪತ್ರ ಹೊರಡಿಸಿದ್ದಾರೆ.
ಅತಂತ್ರ ರಾಜಕೀಯ: 23ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್10, ಬಿಜೆಪಿ8 ಮತ್ತು 5ಜನ ಪಕ್ಷೇತರ ಸದಸ್ಯರಿದ್ದು, ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತದ ಚುಕ್ಕಾಣಿ ಹಿಡಿಯಲು ಪ್ರಮುಖ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಬಹುಮತವಿಲ್ಲದೇ ಪಕ್ಷೇತರ (ಸ್ವತಂತ್ರ) ಸದಸ್ಯರ ಬೆಂಬಲ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.
13 ಮ್ಯಾಜಿಕ್ ನಂ? :
ಒಂದಾನು ವೇಳೆ ಜಿದ್ದಾ-ಜಿದ್ದಿನ ಪೈಪೋಟಿ ನಡೆದರೆ, ಅಧಿಕಾರದ ಬಹುಮತ ಗಳಿಸಲು 13ಸದಸ್ಯರ ಬೆಂಬಲದ ಅವಶ್ಯಕತೆ ಕಂಡುಬರುತ್ತಿದೆ. 23ಸದಸ್ಯರಲ್ಲಿ ಕಾಂಗ್ರೆಸ್ 10ಸದಸ್ಯರನ್ನು ಹೊಂದಿದ್ದು ಬಿಜೆಪಿ 8ಸ್ಥಾನ ಗಳಿಸಿದೆ. ಶಾಸಕಿ ಮತ್ತು ಸಂಸದರ ಮತದಾನದ ಹಕ್ಕಿನಿಂದ ಬಿಜೆಪಿಯ ಬಲವೂ 10ಕ್ಕೆ ಏರಿಕೆಯಾಗಲಿದ್ದು, ಕಾಂಗ್ರೆಸ್‌ನೊoದಿಗೆ ಸಮಬಲ ಸಾಧಿಸಿದಂತಾಗುತ್ತದೆ.ಐವರು ಪಕ್ಷೇತರಲ್ಲಿ ಮೂವರು ಪಕ್ಷೇತರರ ಬೆಂಬಲ ಪಡೆದುಕೊಳ್ಳಲಿರುವ ಪಕ್ಷವು ತನ್ನ ಸಂಖ್ಯಾ ಬಲವನ್ನು 13ಕ್ಕೆ ಹೆಚ್ಚಿಸಿಕೊಂಡರೆ ಮಾತ್ರ ಆಡಳಿತದ ಚಿಕ್ಕಾಣಿ ಹಿಡಿಯಲು ಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ 13 ಯಾವ ಪಕ್ಷಕ್ಕೆ ಅದೃಷ್ಟ-ದುರಾದೃಷ್ಟ ಎನ್ನುವುದು ಚುನಾವಣೆ ನಂತರವಷ್ಟೇ ತಿಳಿದು ಬರಬೇಕಿದೆ.
ಶಾಸಕಿಗೆ ಛಲ :
ಶಾಸಕಿ ರೂಪಾಲಿ ನಾಯ್ಕ, ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಕಾರವಾರ ನಗರಸಭೆ ಮತ್ತು ಅಂಕೋಲಾ ಪುರಸಭೆ ಅಧಿಪತ್ಯವನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಬಿಜೆಪಿ ಪ್ರಾಬಲ್ಯವನ್ನು ಮುಂದುವರಿಸಲು ಪಣ ತೊಟ್ಟಂತಿದೆ. ಆದರೆ ಎರಡು ಕಡೆ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿರುವುದು ಶಾಸಕಿಗೆ ಸವಾಲಾಗಿ ಪರಿಣಮಿಸಿದ್ದು, ಛಲಗಾತಿಯಂತಿರುವ ಶಾಸಕಿ ಗೆಲುವಿನ ಮೆಟ್ಟಿಲೇರಲು ತನ್ನದೇ ಆದ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಸೈಲ್‌ಗೆ ಬಲ :
ಹತ್ತು ಸದಸ್ಯ ಬಲದೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಆಡಳಿತದ ಪಾರುಪತ್ಯ ಮುಂದುವರೆಸಲು ಯೋಚಿಸಿದಂತಿದ್ದು, ತನ್ನದೇ ಆದ ರಾಜಕೀಯ ನಡೆ ಪ್ರದರ್ಶಿಸುತ್ತಿದೆ. ಪಕ್ಷೇತರರ ಒಲವು ಗಳಿಸಿ ಅಧಿಕಾರ ನಡೆಸಲು ಹೊರಟಿರುವ ಕಾಂಗ್ರೆಸ್‌ಗೆ ಮಾಜಿ ಶಾಸಕ ಸತೀಶ ಸೈಲ್ ಮಂಚೂಣಿಯಲ್ಲಿದ್ದಾರೆ. ಒಂದಾನು ವೇಳೆ ಸೈಲ್ ತಂತ್ರಗಾರಿಕೆ ಫಲಿಸಿ, ಕಾಂಗ್ರೆಸ್‌ಗೆ ಅಧಿಕಾರ ಭಾಗ್ಯ ದೊರೆತರೆ ಅದು ಸೈಲ್ ಬಲವನ್ನು ತೋರಿಸಲಿದೆ ಮತ್ತು ಹೆಚ್ಚಿಸಲಿದೆ.
ಅಧ್ಯಕ್ಷ ಆಕಾಂಕ್ಷಿಗಳು :
ಬಿಜೆಪಿಯಿಂದ ಶಾಂತಲಾ ನಾಡ್ಕರ್ಣಿ ಅಧ್ಯಕ್ಷ ಆಕಾಂಕ್ಷಿಯಾಗಿದ್ದು, ತಮ್ಮ ಸರಳತೆ, ಕೌಟುಂಬಿಕ ರಾಜಕೀಯ ಹಿನ್ನಲೆ ಮತ್ತು ಪಕ್ಷದ ಹಿರಿ ಕಿರಿಯ ಮುಖಂಡರ ನಿಕಟ ಸಂಪರ್ಕದಿoದ ಅಧ್ಯಕ್ಷ ಗಾದಿಯ ರೇಸ್‌ನಲ್ಲಿ ಮುಂದಿದ್ದಾರೆ. ಬಿಜೆಪಿಯ ಇನ್ನೊರ್ವ ಪ್ರಬಲ ಆಕಾಂಕ್ಷಿಯಾಗಿ ಕೀರ್ತಿ ರಾಮದಾಸ ನಾಯಕ, ಕಿರಿಯ ಸದಸ್ಯಳಾದರೂ ಸಹ ತನ್ನ ವಿದ್ಯಾರ್ಹತೆ, ಚುರುಕಿನ ವ್ಯಕ್ತಿತ್ವ ಹಾಗೂ ಪತಿ-ಬಿಜೆಪಿಯ ಯುವ ನಾಯಕನ ಸಾಂಧರ್ಬೀಕ ಪಯೋಜನ ಪಡೆದು ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಉಳಿದಂತೆ ಬಿಜೆಪಿಯ ಜಯಾ ನಾಯ್ಕ ಆಕಾಂಕ್ಷಿಯಾಗಿದ್ದು ತನ್ನ ಈ ಹಿಂದಿನ ರಾಜಕೀಯ ಅನುಭವ ಮತ್ತು ಪಕ್ಷದ ಒಡನಾಟವನ್ನು ಓರೆಗೆ ಹಚ್ಚಿದಂತಿದೆ. ಈ ಹಿಂದೆ ಪುರಸಭೆಗೆ ಆಯ್ಕೆಯಾಗಿದ್ದ ಸೂರಜ್ ನಾಯ್ಕ ಮತ್ತೊಮ್ಮೆ ಆಯ್ಕೆಯಾಗಿರುವುದಲ್ಲದೇ ತನ್ನನ್ನು ಅಧ್ಯಕ್ಷ ಹುದ್ದೆಗೆ ಪರಿಗಣಿಸುವಂತೆ ಕೋರಿಕೊಂಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನಿoದ ಮಂಜುನಾಥ ನಾಯ್ಕ ಅಧ್ಯಕ್ಷ ಗಾದಿ ಏರಲು ಆಕಾಂಕ್ಷಿಯಾಗಿದ್ದು, ತನ್ನ ಈ ಹಿಂದಿನ ಉಪಾಧ್ಯಕ್ಷ ಹುದ್ದೆ ನಿರ್ವಹಣೆ ಅನುಭವ ಸಾರಿ ಹೇಳಿದ್ದಾರೆ. ಪೈಪೋಟಿಯಲ್ಲಿರುವ ಇನ್ನೊರ್ವ ಆಕಾಂಕ್ಷಿ ವಿಶ್ವನಾಥ ನಾಯ್ಕ ತಾನು 2ನೇ ಬಾರಿ ಆಯ್ಕೆಯಾಗಿದ್ದು ಹಿರಿತನದ ಆಧಾರದಲ್ಲಿ ತನಗೆ ಅವಕಾಶ ನೀಡುವಂತೆ ಕೋರಿಕೊಂಡಿದ್ದು ತನ್ನ ಆಪ್ತ ಸ್ವತಂತ್ರ ಸದಸ್ಯರ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಮತ್ತು ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿರುವ ಪ್ರಕಾಶ ಗೌಡ ಪಕ್ಷದ ಬೆಂಬಲ ಮತ್ತು ತನ್ನ ಕ್ಷೇತ್ರದ ಅಕ್ಕ-ಪಕ್ಕದ ಹಾಗೂ ಇತರೆ ಪಕ್ಷೇತರ ಸದಸ್ಯರ ಬೆಂಬಲ ಪಡೆಯುವ ಅಧಮ್ಯ ಉತ್ಸಾಹದಲ್ಲಿದ್ದು ಎಲ್ಲವೂ ಅಂದುಕೊAಡAತೆ ನಡೆದರೆ ನೂತನ ಅಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿದಂತಿದೆ.
ಪಕ್ಷೇತರರ ಪ್ರಾಬಲ್ಯ :
ಪಕ್ಷ ರಾಜಕೀಯದ ಹೊರತಾಗಿ, ಪಕ್ಷೇತರರೂ ಆರಂಭಿಕ ಬಿಗು ನಿಲುವು ತಳೆದು ಕಾದು ನೋಡುವ ತಂತ್ರ ಅನುಸರಿಸಿದಂತಿದೆ. ತಮ್ಮ ಬೆಂಬಲ ಕೇಳಿ ಬರುವ ಎಲ್ಲರಿಗೂ ಸದ್ಯ ಸಮಾಧಾನದ ಭರವಸೆ ನೀಡಿ ಕಳುಹಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕೆಲ ಸದಸ್ಯರು ತಮ್ಮ ಆಯ್ಕೆಗೆ ಸಹಕರಿಸಿದವರ ಋಣ-ಭಾರದ ಚೌಕಟ್ಟಿನಲ್ಲಿಯೂ ಇರುವ ಸಾಧ್ಯತೆ ಕೇಳಿ ಬರುತ್ತಿದೆ. ಪುರುಷ ಪಕ್ಷೇತರರನ್ನು ಹೊರತು ಪಡಿಸಿ ಮಹಿಳಾ ಪಕ್ಷೇತರ ಸದಸ್ಯರಿಗೆ ಉಪಾಧ್ಯಕ್ಷ ಹುದ್ದೆ ಒಲಿದು ಬರುವ ಸಾಧ್ಯತೆಗಳಿದೆ. ಪಕ್ಷೇತರರ ಕ್ಷೇತ್ರಾಭಿವೃದ್ಧಿ ಮತ್ತಿತರರ ಬೇಡಿಕೆಗಳನ್ನು ಈಡೇರಿಸಲು 2ರಡು ಪಕ್ಷಗಳು ಮುಂದಾಗುವ ಸಾಧ್ಯತೆ ಇದ್ದು ಪಕ್ಷೇತರರ ಬೆಂಬಲವಿಲ್ಲದೇ ಅಧಿಕಾರ ಭಾಗ್ಯ ಕನಸಿನ ಮಾತಾಗಿದ್ದು, ಪಕ್ಷೇತರರ ಡಿಮಾಂಡ್ ಹೆಚ್ಚಿಸಿದಂತಾಗಿದೆ.
ಚುನಾವಣೆಯಲ್ಲಿ ನಡೆಯಲಿರುವ ನಾನಾ ತಂತ್ರಗಾರಿಕೆ-ಪ್ರಯೋಗಗಳು, ಲೆಕ್ಕಚಾರ, ಪರಿಸ್ಥಿತಿಯೊಂದಿಗಿನ ಹೊಂದಾಣಿಕೆಯಿoದ ಫಲಿತಾಂಶದಲ್ಲಿ ವಿಚಿತ್ರ ತಿರುವು ಪಡೆಯುವ ಸಾಧ್ಯತೆ ಇದ್ದು ಗೆಲುವು ಯಾರದ್ದಾಗಲಿದೆ? ಅಧ್ಯಕ್ಷ-ಉಪಾಧ್ಯಕ್ಷ ಎರಡು ಹುದ್ದೆಗಳು ಮಹಿಳಾ ಪ್ರಾಬಲ್ಯಕ್ಕೆ ಒಳಪಡಲಿದೆಯೇ ಅಥವಾ ಅಧ್ಯಕ್ಷ ಪುರಪಿತೃ ಮತ್ತು ಉಪಾಧ್ಯಕ್ಷ ಪುರಮಾತಾಗಳ ಪಾಲಾಗಲಿದೆಯೇ ಎನ್ನುವುದು ಅಕ್ಟೋಬರ್ 21ರಂದು ಖಚಿತಗೊಳ್ಳಲ್ಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ