ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಅಂತಿಮ ಘಟ್ಟ ತಲುಪಿದೆ ನಾಳೆ ನಡೆಯುವ ಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಕೆಡಿಸಿಸಿ ಬ್ಯಾಂಕಿನ ಮುಂದಿನ ಅಧ್ಯಕ್ಷೀಯ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಬ್ಯಾಂಕಿನ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಕಾರ್ಮಿಕ ಮತ್ತು ಸಕ್ಕರೆ ಸಚಿವ, ಹಾಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವರಾಮ ಹೆಬ್ಬಾರ್ ಆಯ್ಕೆ ಬಹುತೇಕ ಅಂತಿಮಗೊಂಡಿದ್ದು, ನಾಳೆಯ ಸಭೆಯಲ್ಲಿ ಅಧಿಕೃತಗೊಳ್ಳಲಿದೆ ಎನ್ನಲಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದ್ದು, ಅನುಭವಿಗಳಿಂದ ಎಲ್ಲ ತರಹದ ಕಸರತ್ತುಗಳು ನಡೆದಿದೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಶಿವಾನಂದ ಹೆಗಡೆ ಕಡತೋಕ, ಮೋಹನದಾಸ ನಾಯಕ ಹಾಗು ಸುರೇಶ್ಚಂದ್ರ ಕೆಶಿನ್ಮನೆ ಹೆಸರು ಕೇಳಿಬರುತ್ತಿದೆ.
ಅನುಭವದ ಆಧಾರ ಮತ್ತು ಕರಾವಳಿ ಭಾಗಕ್ಕೆ ನ್ಯಾಯ ನೀಡುವ ದೃಷ್ಟಿಯಿಂದ ಶಿವಾನಂದ ಕಡತೋಕಗೆ ಉಪಾಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಚಿಂತನೆ ನಡೆದಿದ್ದು, ಹಾಗಾದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡೂ ಹವ್ಯಕರಿಗೆ ದೊರೆಯುತ್ತದೆ. ಇದಕ್ಕೂ ಸಹ ಜಾತಿ ರಾಜಕೀಯದ ಅಪಸ್ವರ ಕೇಳಿಬರುತ್ತಿದೆ ಎನ್ನಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್