ಗೂಂಡಾ ಕಾಯ್ದೆಯಡಿ ಶಿರಸಿಯಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತ ಅರೆಸ್ಟ್

ಕೊಲೆ, ದೊಂಬಿ, ಕೊಲೆಗೆಯತ್ನ, ಕಳ್ಳತನ ಸೇರಿದಂತೆ ಹಲವು ಆರೋಪ
ಈ ಅಪರಾಧಿಯ ಹಿನ್ನಲೆ ನೋಡಿ
ಜಿಲ್ಲೆಯಲ್ಲಿ ಗೂಂಡಾ ಕಾಯ್ದೆಯಡಿ ಬಂಧಿತನಾದ ನಾಲ್ಕನೇ ಆರೋಪಿ

ಶಿರಸಿ: ಹಲವು ಠಾಣೆಗಳಲ್ಲಿ ಕೊಲೆ, ದೊಂಬಿ, ಕೊಲೆಗೆಯತ್ನ, ಕಳ್ಳತನ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಸ್.ಡಿ.ಪಿ.ಐ ಕಾರ್ಯಕರ್ತನೋರ್ವನನ್ನು ಗೂಂಡಾ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿದೆ. ಶಿರಸಿಯ ಕಸ್ತೂರಬಾ ನಗರದ ಮಹ್ಮದ್ ಫಾರೂಕ್ ಶಫೀವುಲ್ಲಾ ಪಟೇಲ್ ಬಂಧಿತ ವ್ಯಕ್ತಿ. ಈತ ಅಕ್ರಮ ಭಟ್ಟ ಸಾರಾಯಿ ವ್ಯವಹಾರ, ಔಷಧಾಪರಾಧ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಚಟುವಟಿಕೆಗಳ ಅಧಿನಿಯಮ 1985 ರನ್ವಯ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಪರಾಧಿಯ ಹಿನ್ನಲೆ

ಕಸ್ತೂರಬಾ ನಗರದ ನಿವಾಸಿಯಾದ ಮಹ್ಮದ್ ಫಾರೂಕ್ ಶಫೀವುಲ್ಲಾ ಪಟೇಲ್ ಇತನ ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ, ಕೊಲೆ, ಕೊಲೆಯ ಸಾಕ್ಷ ನಾಶ, ಕೊಲೆಗೆ ಸಂಚು, ಪ್ರಯತ್ನ, ದೊಂಬಿ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಇತನ ಅಕ್ರಮ ಅಪರಾಧಿಕ ಕೃತ್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎಂಓಬಿ ಶೀಟ್, ರೌಡಿ ಶೀಟ್ ಗಳನ್ನು ತೆರೆಯಲಾಗಿತ್ತು. ಅದಾಗ್ಯೂ ಮಹ್ಮದ್ ಫಾರೂಕ್ ಎಸ್.ಡಿ.ಪಿ.ಐ ಸಂಘಟನೆಯೊoದಿಗೆ ಸೇರಿಕೊಂಡು, ಪುಂಡರ ಗುಂಪು ಕಟ್ಟಿಕೊಂಡು ಅಪರಾಧಿಕ ಕೃತ್ಯಗಳನ್ನು ಎಸಗುತ್ತಾ ತನ್ನ ಹುಂಬು- ಕ್ರೂರ ಸ್ವಭಾವದಿಂದ ಸಾರ್ವಜನಿಕರನ್ನು ಹೆದರಿಸುವ, ಸಾಮಾನ್ಯ ಜನರಲ್ಲಿ ಭಯಭೀತಿಯನ್ನು ಸೃಷ್ಟಿಸಿ ಮತಿಯ ಕೋಮುಗಲಭೆಗಳು ಉಂಟಾಗುವoತೆ ಪ್ರಚೋದನೆ ನೀಡುತ್ತಾ ಸಮಾಜದ ಶಾಂತಿ ಸುವ್ಯವಸ್ಥೆಗೆ ನಿರಂತರವಾಗಿ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದೆ.


ಈತನ ಚಟುವಟಿಕೆಗಳನ್ನು ನಿಗ್ರಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್, ಬದರಿನಾಥ ಹಿಂದಿನ ಶಿರಸಿ ಡಿ.ವಾಯ್.ಎಸ್.ಪಿ. ಗೋಪಾಲ ಕೃಷ್ಣ ನಾಯಕರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಪ್ರದೀಪ್ ಬಿ.ಯು ಹಾಗೂ ಪಿ.ಎಸ್.ಐ ನಾಗಪ್ಪ ನೇತೃತ್ವದಲ್ಲಿ ಮಹ್ಮದ್ ಫಾರೂಕ್ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗೆ ವರದಿ ಸಲ್ಲಿಸಲಾಗಿತ್ತು.

ಡಿಸೆಂಬರ್ 7ರಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿ ಡಾ. ಹರೀಶಕುಮಾರ್ ಮಹ್ಮದ್ ಫಾರೂಕ್ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಮಾಡಿದ್ದು ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ಡಿ.ನಾಯ್ಕ ನೇತೃತ್ವದ ತಂಡ ಕುಖ್ಯಾತ ರೌಡಿ ಶೀಟರ್ ಮಹ್ಮದ್ ಫಾರೂಕ್ನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಅಪರಾಧಿಕ ಕೃತ್ಯ, ಚಟುವಟಿಕೆಗಳಲ್ಲಿ ನಿರತರಾದ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತ ರೌಡಿ ಆಸಾಮಿಗಳನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ವಿಸ್ಮಯ ನ್ಯೂಸ್, ಶಿರಸಿ

Exit mobile version