ನವಮುರ್ಡೇಶ್ವರ ನಿರ್ಮಾಣದ ರೂವಾರಿ ಇನ್ನಿಲ್ಲ: ಬೆಳಗಿನ ಜಾವ ಹೃದಯಾಘಾತದಿಂದ ನಿಧನ

ಭಟ್ಕಳ ; ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ,ಮುರ್ಡೇಶ್ವರದ ನಿರ್ಮಾತೃ,
ಆರ್.ಎನ್. ಶೆಟ್ಟಿ (92) ಗುರುವಾರ ಡಿ.17ರ ನಸುಕಿನ 2 ಗಂಟೆ ಸುಮಾರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಇಡಲಾಗುವುದು. ಬಳಿಕ ಅಂತ್ಯಸಂಸ್ಕಾರವನ್ನು ಸಂಜೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದರು.

1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟೆ, ವಾರಾಹಿ ಜಲ ವಿದ್ಯುತ್ ಯೋಜನೆ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವೇ ಮೊದಲಾದ ಹಲವು ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕರ್ನಾಟಕದ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ. ಮುರ್ಡೇಶ್ವರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಕಂಪೆನಿ ಮೂಲಕ ಅನೇಕ ಸೇತುವೆ, ಅಣೆಕಟ್ಟು, ಕಟ್ಟಡಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ. ಅಲ್ಲದೆ, ಮುರ್ಡೇಶ್ವರ ಸಮುದ್ರ ತೀರದಲ್ಲಿ ಅತಿಎತ್ತರದ ಶಿವನ ಪ್ರತಿಮೆ ಸ್ಥಾಪಿಸಿ, ಮುರ್ಡೇಶ್ವರಕ್ಕೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ತಂದ ಹಿರಿಮೆ ಆರ್ ಎನ್ ಶೆಟ್ಟಿಯವರದು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version