Info
Trending

ಶಿರಸಿ ಸಾಧಕನಿಗೆ ಒಲಿದ ಅಮೆರಿಕಾದ ಕೃಷಿ ಇಲಾಖೆಯ ಅತ್ಯುಚ್ಛ ಪ್ರಶಸ್ತಿ

ಶಿರಸಿ: ಅಮೆರಿಕಾ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆಯ ಅತ್ಯುಚ್ಛ ಪ್ರಶಸ್ತಿಗೆ ತಾಲೂಕಿನ ಸಾಲ್ಕಣಿಯ ಸುಬ್ರಾಯ ಹೆಗಡೆ ಭಾಜನರಾಗಿದ್ದು, ಜನವರಿ12 ರಂದು ಅವರಿಗೆ ಪ್ರಶಸ್ತಿಯನ್ನು ಅಂತರ್ಜಾಲ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗಿದೆ.

2007ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆಯನ್ನು (USDA) ಸೇರಿದ ಸುಬ್ರಾಯ ಹೆಗಡೆ, ಪ್ರಸ್ತುತ ಅದರ ಜೈವಿಕ ತಂತ್ರಜ್ಞಾನ ಸೇವೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯಲ್ಲಿ ಅವರು ವಂಶಾಣು ಪರಿವರ್ತಿತ ಸಸ್ಯ, ಕೀಟ ಹಾಗೂ ಸೂಕ್ಷ್ಮಜೀವಿಗಳು ಮನುಷ್ಯರ ಹಾಗೂ ಪಶುಗಳ ಆಹಾರ ಮತ್ತು ಕೃಷಿ ಪರಿಸರದ ಮೇಲೆ ದುಃಷ್ಪರಿಣಾಮ ಉಂಟುಮಾಡದಂತೆ ನಿಯಂತ್ರಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಸುಬ್ರಾಯ ಹೆಗಡೆಯವರ ಪರಿಚಯ:

ತಾಲೂಕಿನ ಸಾಲ್ಕಣಿ ಮೂಲದ ಸುಬ್ರಾಯ ಹೆಗಡೆ, ಕಾವೇರಿ ಹಾಗೂ ಗಣಪತಿ ವೀರಪ್ಪ ಹೆಗಡೆ ಇವರ ಕಿರಿಯ ಪುತ್ರರಾಗಿದ್ದು, ಶಿರಸಿಯ ಪ್ರಖ್ಯಾತ ವೈದ್ಯ ಡಾ.ಕೆ.ಎಸ್.ಹೆಗಡೆ ಕೆಶಿನಮನೆಯವರ ಅಳಿಯರಾಗಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಸ್ನಾತಕೊತ್ತರ ಅಧ್ಯಯನ ನಡೆಸಿ1989ರಲ್ಲಿ ಪಿ.ಎಚ್ ಡಿ. ಅಧ್ಯಯನ ಪೂರೈಸಿದರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ ಅವರು ಮುಂದೆ1994ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಸೇರ್ಪಡೆಗೊಂಡರು. ತಮ್ಮ ಸಂಶೋಧನಾ ಅವಧಿಯಲ್ಲಿ ಅವರು ಭತ್ತ ಮತ್ತು ನೆಲಗಡಲೆ ಬೆಳೆಗಳಲ್ಲಿ ಅನುಕ್ರಮವಾಗಿ ಧಾನ್ಯ ಹಾಗೂ ಬೀಜಗಳ ಇಳುವರಿ ಅಧಿಕಗೊಳಿಸುವ ಕ್ರಮಗಳನ್ನು ಕುರಿತು ಪ್ರಯೋಗ ನಡೆಸಿದರು. ತಮ್ಮ ಸಂಶೋಧನೆಗೆ ಅವರು ಜಗತ್ತಿನ ವಿವಿಧ ಭಾಗಗಳ ಹಲವು ಪ್ರಬೇಧಗಳನ್ನು ಸಂಗ್ರಹಿಸಿ ಆ ತಳಿಗಳಲ್ಲಿ ಇರುವ ವಿಶಿಷ್ಟ ಗುಣಗಳನ್ನು ಒಟ್ಟುಗೂಡಿಸಿ ಅಧಿಕ ಇಳುವರಿ ಪಡೆಯಲು ಯಾವ ಸಂಯೋಜನೆ ಪರಿಣಾಮಕಾರಿ ಎನ್ನುವ ಅಂಶವನ್ನು ಪರಿಶೀಲನೆ ಮಾಡಿದ್ದಾರೆ.

1994ರಿಂದ 2006ರವರೆಗೆ ಅವರು ಕ್ಯಾಲಿಫೋರ್ನಿಯಾದ ಸಾರ್ವಜನಿಕ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ತಳಿವಿಜ್ಞಾನವನ್ನು ಬೋಧಿಸಿದರು ಮತ್ತು ಗೋಧಿ ಮತ್ತು ಮೂಲಂಗಿ ಕುರಿತು ಸಂಶೋಧನೆ ನಡೆಸಿದರು.

ಸುಬ್ರಾಯ ಹೆಗಡೆ ಸಾಧನೆ ಮತ್ತು ಸಂಶೋಧನೆಗಳು:

ಇವರು ಗೋಧಿಯ ನೈಸರ್ಗಿಕ ಪ್ರಬೇಧಗಳನ್ನು ಅವುಗಳ ಮೂಲನೆಲೆಗಳಿಂದ (ಲೆಬನಾನ್, ಸಿರಿಯಾ, ಟರ್ಕಿ) ಸಂಗ್ರಹಿಸಿ ಅವುಗಳಲ್ಲಿ (ವಿಶೇಷವಾಗಿ ಬ್ರೆಡ್‌ ಗೋಧಿಯಲ್ಲಿ) ಎಷ್ಟು ಪ್ರಮಾಣದಲ್ಲಿ ತಳಿ ವೈವಿಧ್ಯತೆಯ ಅಂಶಗಳು ಉಳಿದುಕೊಂಡಿವೆ ಎಂದು ಸಂಶೋಧನೆ ಮಾಡಿದ್ದಾರೆ.

ಸುಬ್ರಾಯ ಅವರು ಕಳೆಯಲ್ಲದ ಸಸ್ಯಗಳು ಹೇಗೆ ಕಳೆಯಾಗಿ ಬದಲಾವಣೆ ಆಗುವುದರ ಹಿಂದಿನ ಆನುವಂಶಿಯ ಕಾರಣಗಳನ್ನೂ ಅಧ್ಯಯನ ಮಾಡಿದ್ದಾರೆ.

ಅವರು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಸಭೆಗಳಲ್ಲಿ (ವೈಜ್ಞಾನಿಕ ವಿಚಾರ ಸಂಕಿರಣಗಳು, ತಾಂತ್ರಿಕ ತಜ್ಞರ ಸಮಿತಿ, ಐರೋಪ್ಯ ಹಾಗೂ ದಕ್ಷಿಣ ಅಮೇರಿಕಾದ ರಾಷ್ಟ್ರಗಳಲ್ಲಿ ಮತ್ತು ಭಾರತದಲ್ಲಿ, ಅಪಾಯ ಮಾಪನ ತರಬೇತಿ ಕಾರ್ಯಕ್ರಮಗಳಲ್ಲಿ) ತಾಂತ್ರಿಕ ಪರಿಣಿತರಾಗಿ ಸೇವೆ ಸಲ್ಲಿಸಿದ್ದಾರೆ. ಅದಲ್ಲದೇ, 50ಕ್ಕೂ ಅಧಿಕ ಅಂತಹ ಸಭೆಗಳಲ್ಲಿ ತಳೀಯ ಮಾರ್ಪಾಟು (ವಂಶಾಣು ಪರಿವರ್ತನೆ) ನಿಯಂತ್ರಣ ಕುರಿತು ವೈಜ್ಞಾನಿಕ ಉಪನ್ಯಾಸಗಳನ್ನು ನೀಡಿದ್ದಾರೆ.

ಅವರು, ಈ ಹಿಂದೆ, ಅಮೆರಿಕ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆಯಿಂದ (USDA) ವಂಶಾಣು ಪರಿವರ್ತಿತ ರೋಗ ಹಾಗೂ ಕೀಟ ನಿರೋಧಕ ತೋಟಗಾರಿಕಾ ಹಾಗೂ ಕ್ಷೇತ್ರ ಬೆಳೆಗಳ ಅಭಿವೃದ್ಧಿಗೆ ಮಾಡಿದ ಸೇವೆಗಾಗಿ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ‌ ನ್ಯೂಸ್

Back to top button