ಕಾರವಾರ: ಇತ್ತಿಚೆಗೆ ಆಹಾರಪದಾರ್ಥಗಳಲ್ಲಿ ವಿಪರೀತವಾಗಿ ರಾಸಾಯನಿಕ ಪದಾರ್ಥ ಬಳಸಲಾಗುತ್ತಿದೆ ಎಂಬ ಆರೋಪ ಸಮಾನ್ಯವಾಗಿದೆ. ವಿಪರೀತ ರಾಸಾಯಿಕ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಗರದ 10 ಕ್ಕೂ ಹೆಚ್ಚು ಫಾಸ್ಟ್ ಪುಡ್ ಹಾಗೂ ಹೊಟೇಲ್ ಗಳ ಮೇಲೆ ದಾಳಿ ನಡೆಸಿ ರಾಸಾಯನಿಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ನಗರದ ಕೊಡಿಭಾಗ ರಸ್ತೆ, ಗ್ರೀನ್ ಸ್ಟ್ರೀಟ್, ಕುಟಿನೋ ರಸ್ತೆಯಲ್ಲಿರುವ ಹೊಟೇಲ್ ಹಾಗೂ ಫಾಸ್ಟ್ ಫುಡ್ ಮಳಿಗೆಗಳಿಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಆಹಾರ ತಯಾರಿಸಲು ಬಳಸುವ ಪದಾರ್ಥಗಳನ್ನು, ಅಡುಗೆ ಮಾಡುವ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಕೆಲವು ಅಂಗಡಿಗಳಲ್ಲಿ ಅಜಿನೊಮೋಟೊ, ಐಎಸ್ ಐ ಮಾರ್ಕ್ ಇಲ್ಲದ ಕಲರ್ ಹಾಗೂ ಅವಧಿ ಮೀರಿದ ಸಾಂಬಾರು ಪದಾರ್ಥಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಕಂಡುಬAದ ಹಿನ್ನೆಲೆಯಲ್ಲಿ ಎಲ್ಲವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಹೋಟೆಲ್ ಸ್ವಚ್ಚವಾಗಿರಸದ ಹಿನ್ನೆಲೆಯಲ್ಲಿ ಮಾಲಕರು ಹಾಗೂ ಹೊಟೇಲ್ ಕೆಲಸಗಾರರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ರಾಸಾಯನಿಕ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮತ್ತೆ ಇಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸದಂತೆ ಅಂತಿಮ ಎಚ್ಚರಿಕೆ ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ್, ಬೀದಿ ಬದಿಯಲ್ಲಿ ಸ್ವಚ್ಚತೆ ಸೇರಿದಂತೆ ಇನ್ನಿತರ ಕಾರಣಗಳಿಂದ ಆಹಾರ ಸೇವಿಸದ ಜನರು ದೊಡ್ಡ ಹೋಟೆಲ್ ಗಳಿಗೆ ಆಗಮಿಸುತ್ತಾರೆ. ಆದರೆ ಇಂತಹ ಹೊಟೆಲ್ ಗಳಲ್ಲಿಯೂ ಆಹಾರ ಸರಿಯಾಗಿ ನೀಡದ ಬಗ್ಗೆ ದೂರು ಬಂದಿತ್ತು. ಅದರಂತೆ ಇಂದು ನಗರದ ಹೊಟೆಲ್ ಹಾಗೂ ಫಾಸ್ಟ್ ಫುಡ್ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು ಅಜಿನೊಮೋಟೊದಂತ ರಾಸಾಯನಿಕ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಈ ಎಲ್ಲ ಮಾಲಕರಿಗೂ ನೋಟಿಸ್ ಜಾರಿ ಮಾಡಿದ್ದು ಮುಂದಿನ ದಿನಗಳಲ್ಲಿಯೂ ದಾಳಿ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ