ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಪೊಲೀಸ್ ಇಲಾಖೆ: ಅಂಕೋಲಾ ಪೊಲೀಸ್ ಠಾಣೆಗೆ ಪ್ರಥಮ ಭೇಟಿ ನೀಡಿದ ಎಸ್ಪಿ: ದಿಟ್ಟ ಅಧಿಕಾರಿಯ ಸ್ಪಷ್ಟ ನುಡಿಗಳೇನು ?
ಅಂಕೋಲಾ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಸೇರಿದಂತೆ ಇನ್ನಿತರ ಎಲ್ಲ ರೀತಿಯ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಇಂತಹ ಕೃತ್ಯಗಳು ಎಲ್ಲಿಯೇ ಕಂಡು ಬಂದರೂ ಸಾರ್ವಜನಿಕರು ಯಾವುದೇ ಭಯ ಇಲ್ಲದೇ ನೇರವಾಗಿ ಮಾಹಿತಿ ನೀಡಬಹುದು. ಇಲಾಖೆ ಅಂತವರ ಗೌಪ್ಯತೆಯನ್ನು ಕಾಯ್ದುಕೊಳ್ಳುವುದರೊಂದಿಗೆ, ಕೆಲ ಪ್ರಕರಣಗಳಲ್ಲಿ ಪ್ರಮುಖ ಮಾಹಿತಿ ನೀಡುವವರಿಗೂ ಗೌರವ -ಬಹುಮಾನ ನೀಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಂಕೋಲಾ ಪೊಲೀಸ್ ಠಾಣೆಗೆ ಪ್ರಥಮ ಬಾರಿಗೆ ಭೇಟಿ ನೀಡಿ,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಮಾಹಿತಿ ಬಂದರೆ ಯಾವುದೇ ಮುಲಾಜಿಲ್ಲದೇ ಕಠಿಣ ಕಾನೂನು ಕೂಡಲೇ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ನಿಜ, ಅವುಗಳಲ್ಲಿ ಹಲವಾರು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.ಹಳೆಯ ಕೆಲ ಬಾಕಿ ಪ್ರಕರಣಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ವಿಧ್ವಂಸಕಾರಿ ಕೃತ್ಯಗಳ ಕುರಿತು ಭಯ ಪಡುವ ಅಗತ್ಯತೆ ಇಲ್ಲ.ಇಲಾಖೆ ಈ ದಿಶೆಯಲ್ಲಿ ಹೆಚ್ಚಿನ ಗಮನ ಹರಿಸಿ ಕರ್ತವ್ಯ ನಿರ್ವಹಿಸುತ್ತದೆ ಎಂದರು. ವಿಸ್ಮಯ ವಾಹಿನಿಯೊಂದಿಗೆ ಮಾತನಾಡಿ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆ ಮತ್ತು ನೂತನ ವಾಹನ ಪೂರೈಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ಜಿಲ್ಲೆಯಲ್ಲಿ ಸುಮಾರು 120 ಹೊಸ ಸಿಬ್ಬಂದಿಗಳನ್ನು ತುಂಬಲು ಇಲಾಖೆ ಮಟ್ಟದಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಅಂತೆಯೇ ಠಾಣೆಗಳಿಗೆ ವಾಹನಗಳನ್ನು ರಾಜ್ಯ ಮಟ್ಟದಲ್ಲಿ ಪೂರೈಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಂಕೋಲಾ ಠಾಣೆಗೂ ನೂತನ ವಾಹನ ನೀಡಲು ಪ್ರಯತ್ನ ಮಾಡಲಾಗುವುದು ಎಂದರು.
ಎಲ್ಲಾ ಠಾಣೆಗಳಲ್ಲಿ ಪಿರ್ಯಾದಿಗಳ ಸಭೆ ನಡೆಸಲಾಗುತ್ತಿದೆ.ಇತ್ತೀಚೆಗೆ ಮಹಿಳೆಯರು ಸೇರಿ ಇತರನೇಕರು ನೇರವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸುತ್ತಿದ್ದಾರೆ. ಅಂತವರಿಗೆ ನಮ್ಮ ಇಲಾಖೆ ಇತಿಮಿತಿಯಲ್ಲಿ ಕಾನೂನಿನ ರೀತ್ಯ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ, ಕಾನೂನು ಪರಿಪಾಲನೆ, ಶಾಂತಿ – ಸು-ವ್ಯವಸ್ಥೆಗೆ ಇಲಾಖೆಯ ಜೊತೆ ಸಾರ್ವಜನಿಕರು ಸಹಕರಿಸಬೇಕಿದೆ ಎಂದರು.ಸುದ್ದಿಗೋಷ್ಠಿಯಲ್ಲಿಡಿ.ವೈ.ಎಸ್ಪಿ ವೆಲಂಟೆನ್ ಡಿಸೋಜ, ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಉಪಸ್ಥಿತರಿದ್ದರು.
ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ, ಇಲಾಖಾ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿ ಕಡಕ್ ಎಚ್ಚರಿಕೆ ನೀಡಿ,ಕಟ್ಟುನಿಟ್ಟಿನ ಕ್ರಮಗಳ ಗಳನ್ನು ಜಾರಿಗೆ ತಂದು ಅಕ್ರಮ ವ್ಯವಹಾರಗಳಿಗೆ ಬ್ರೇಕ್ ಹಾಕಿ ಸುತ್ತಾ, ಎಲ್ಲಡೆಯೂ ಗಮನ ಸೆಳೆಯುತ್ತಿರುವ ಜನಪರ ನಿಲುವಿನ ಈ ದಿಟ್ಟ ಮಹಿಳಾ ಅಧಿಕಾರಿಯ ಕರ್ತವ್ಯ ನಿಷ್ಠೆಗೆ ಪ್ರಜ್ಞಾವಂತ ವಲಯದಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ