Focus News
Trending

ವಸಂತ ಕಾವ್ಯ ಸಂಭ್ರಮ: ಪುಸ್ತಕ ಬಿಡುಗಡೆ ಕಾರ್ಯಕ್ರಮ

ಅಂಕೋಲಾ : ಸಾಹಿತ್ಯ ರಚನೆಯಲ್ಲಿ ಪ್ರಕೃತಿ, ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಅಂಕೋಲೆಯಲ್ಲಿ ಸಾಹಿತಿಗಳಾಗಿ ಬೆಳೆಯಲು ಬೇಕಾದ ಎಲ್ಲ ಪೂರಕ ವಾತಾವರಣ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ, ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಆಯ್ ಕ್ಯೂ ಎ ಸಿ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ ವಸಂತ ಕಾವ್ಯ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕರಾವಳಿ ತೀರದ ಜನರ ಬದುಕಿನಲ್ಲಿ ಸಾಹಿತ್ಯ ಹಾಸುಹೊಕ್ಕಾಗಿದೆ. ಇಲ್ಲಿನ ಕಡಲ ತೀರ, ಸಮೃದ್ಧ ಪ್ರಕೃತಿ ಸೌಂದರ್ಯ ಸಾಹಿತ್ಯ ರಚನೆಗೆ ಪ್ರೇರೇಪಿಸುತ್ತದೆ. ಇಲ್ಲಿನ ಹಿರಿಯ ಸಾಹಿತಿಗಳು ಯುವ ಸಾಹಿತಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಸಾಹಿತ್ಯ ಪರಿಷತ್ತು ಕೂಡ ಹೊಸ ಹೊಸ ಸಾಹಿತಿಗಳಿಗೆ ಪ್ರೋತ್ಸಾಹಿಸುತ್ತಿದೆ ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ಸಾಹಿತ್ಯ ರಚನೆಯಲ್ಲಿ ಗಮನಹರಿಸಬೇಕು. ಆ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದರು.

ಕೃತಿಕಾರ ಉದಯ ಹಬ್ಬು ಮಾತನಾಡಿ ಡಾ.ದಿನಕರ ದೇಸಾಯಿಯವರನ್ನು ಆದರ್ಶವಾಗಿಟ್ಟುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದೇನೆ. ಸಾಹಿತಿಗಳನ್ನು ತಿದ್ದಬೇಕೆ ಹೊರತು ಟೀಕಿಸಬಾರದು. ಕಟುವಾದ ವಿಮರ್ಶೆಗಳು ಲೇಖಕರಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ. ಅಂತಹ ವಿಮರ್ಶೆಗಳನ್ನು ವಿದ್ಯಾರ್ಥಿಗಳು ಓದಿದಾಗ ಹೆಚ್ಚು ಬರೆಯಲು ಸಹಕಾರಿಯಾಗುತ್ತದೆ ಎಂದರು. ವಿಶ್ರಾಂತ ಪ್ರಾಚಾರ್ಯ ಡಾ. ಆರ್ ಜಿ ಗುಂದಿ ಮಾತನಾಡಿ ಉದಯ ಹಬ್ಬು ರಚಿಸಿದ “ಓದಿನ ಮನೆ” ಕೃತಿಯನ್ನು ಪರಿಚಯಿಸಿ. ಉದಯ ಹಬ್ಬುರವರು ಈವರೆಗೆ 70 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು “ಓದಿನ ಮನೆ” ಪುಸ್ತಕದಲ್ಲಿ 68 ಲೇಖಕರ ಕೃತಿಗಳ ವಿಮರ್ಶೆ ಒಳಗೊಂಡಿದೆ.

ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು, ಸಾಹಿತ್ಯ ರಚನೆಯಲ್ಲಿ ಆಸಕ್ತಿ ವಹಿಸಬೇಕು. ಬರೆಯುವ ಜವಾಬ್ದಾರಿ ಬಂದಾಗ ಜೀವನ ಮೌಲ್ಯಗಳು ತಾವಾಗಿಯೇ ಹೆಚ್ಚಾಗುತ್ತವೆ ಎಂದರು. ಉದಯ ಹಬ್ಬುರವರ ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಪಿ ಎಂ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಉದಯ ಹಬ್ಬುರವರ ಇನ್ನೊಂದು ಕೃತಿಯಾದ “ಹೊಸ ಓದು ಹೊಸ ನೋಟ” ಕುರಿತು ಮಾತನಾಡಿದರು.

ಪ್ರಾಚಾರ್ಯೆ ಶಾರದಾ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನ ಪ್ರಸಿದ್ಧ ಸಾಹಿತಿಗಳ ಸಮಾಗದಲ್ಲಿ ನಡೆದ ಕಾರ್ಯಕ್ರಮ ಸಾಹಿತ್ಯದ ಹಬ್ಬದ ವಾತಾವರಣವನ್ನು ಸೃಷ್ಠಿಸಿದೆ ಎಂದರು. ವೇದಿಕೆಯಲ್ಲಿ ಕಸಾಪ ಕಾರ್ಯದರ್ಶಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ ನಾಯಕ ಹೊಸ್ಕೇರಿ, ಮಕ್ಕಳ ಕವಿ ನಾಗೇಂದ್ರ ತೊರ್ಕೆ, ಕಸಾಪ ತಾಲೂಕಾ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಎನ್ ಡಿ ಅಂಕೋಲೆಕರ, ಉಪನ್ಯಾಸಕಿ ಸುಮಯಾ ಸಯ್ಯದ್, ಕನ್ನಡ ವಿಭಾಗದ ಉಪನ್ಯಾಸಕಿ ಪ್ರತಿಮಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕವಿ ನಾಹೇಂದ್ರ ತೊರ್ಕೆ, ಪ್ರೊ. ಮೋಹನ ಹಬ್ಬು, ಎನ್ ಡಿ ಅಂಕೋಲೆಕರ, ಸಾತು ಗೌಡ ಬಡಗೇರಿ, ರೇಣುಕಾ ರಮಾನಂದ, ಅಕ್ಷತಾ ಕೃಷ್ಣಮೂರ್ತಿ, ಜಯಶೀಲ ಆಗೇರ, ಸಂಧ್ಯಾನಾಯ್ಕ ಉಳವರೆ ಇನ್ನಿತರರು ಹಾಗೂ ವಿದ್ಯಾರ್ಥಿಗಳು ತಮ್ಮ ಸ್ವರಚಿತ ಕವನಗಳನ್ನು ಓದಿದರು. ಪ್ರೊ. ಮೋಹನ ಹಬ್ಬು ಪ್ರಾಸ್ತಾವಿಕ ಮಾತನಾಡಿದರು. ಮಾರುತಿ ಗಾವಡೆ ಕವನ ವಾಚನ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿನಿ ಸೌಜನ್ಯ ಖಾರ್ವಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಸಾಪ ಕಾರ್ಯದರ್ಶಿ ಜಿ ಆರ್ ತಾಂಡೇಲ ವಂದಿಸಿದರು.ಕಸಾಪ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button