ಅಂಕೋಲಾ: ಮಾಜಿ ಸೈನಿಕ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತ ಅಂಬಾರಕೊಡ್ಲ ನಿವಾಸಿ ರಘುವೀರ ನಾರಾಯಣ ಐಗಳ್ (75) ಹೃದಯಾಘಾತದಿಂದ ನಿಧನರಾದರು.
ಸೇನೆಯಲ್ಲಿ ಸೇವೆ ಸಲ್ಲಿಸಿದ್ದಲ್ಲದೇ, ನಂತರ ಗೋವಾದ ಹೆಸರಾಂತ ಕಂಪನಿಯಲ್ಲೂ ಉದ್ಯೋಗ ಮಾಡಿದ್ದರು. ನಂತರ ಅಂಕೋಲಾದ ಕೋಟೇವಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ, ಸ್ಮಶಾನ ಕಾವಲುಗಾರರಾಗಿ ದಶಕಗಳಿಗೂ ಹೆಚ್ಚು ಕಾಲ ಅವಿರತ ಸೇವೆ ಸಲ್ಲಿಸಿ, ಸಾವಿರಾರು ಶವ ಸಂಸ್ಕಾರ ಕಾರ್ಯದಲ್ಲಿ ನೆರವಾಗಿದ್ದರು.
ಪೋಲೀಸ್ ಇಲಾಖೆಗೆ ಪೂರಕವಾಗಿ ನೂರಾರು ಅನಾಥ ಶವಗಳ ಅಂತ್ಯ ಸಂಸ್ಕಾರಕ್ಕೂ ವಿಶೇಷ ಸೇವೆ ಸಲ್ಲಿಸುತ್ತ ಬಂದಿದ್ದರು. ರಸ್ತೆ ಯಂಚಿಗೆ ಸಾಗುವಾಗ ತಮಗೆ ಎದುರಾಗುವ ವೃದ್ಧರು, ಬಿಕ್ಷುಕರು, ಅಸಹಾಯಕರ ಪಾಲಿಗೆ ಆಪತ್ಬಾಂಧವರಾಗಿ, ಸೂಕ್ತ ಊಟೋ ಪಚಾರ ನೀಡಿ, ಔಷಧಿ ತಂದು ಕೊಟ್ಟು ಸತ್ಕರಿಸುತ್ತಿದ್ದರು. ಕೀವು ಮತ್ತು ಹುಳಬಾಧೆಯಿಂದ ಅತೀವ ವೇದನೆ ಪಡುತ್ತಿದ್ದ ಗಾಯಾಳುವೋರ್ವನನ್ನು ತನ್ನ ಮನೆಯಂತಿರುವ ಸ್ಮಶಾನದ ಬಳಿ ಕರೆದೊಯ್ದು ಅಲ್ಲಿಯೇ ಬಹುಕಾಲ ಇರಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿ ತನ್ನ ಅಪ್ರತಿಮ ಮಾನವೀಯ ಸೇವೆ ಸಲ್ಲಿಸಿ ಹಲವರಿಗೆ ಮಾದರಿಯಾಗಿದ್ದರು.
ಅಂಕೋಲದಲ್ಲಿ ಅಗ್ನಿಶಾಮಕ ಠಾಣೆ ಕಾರ್ಯನಿರ್ವಹಿಸುವ ಪೂರ್ವ,ಆಳದ ಬಾವಿಯಲ್ಲಿ ಬಿದ್ದ ಮೃತದೇಹಗಳನ್ನು ಶೋಧಿಸಲು,ಹಳ್ಳ-ಕೊಳ್ಳ – ಸಮುದ್ರಗಳಲ್ಲಿಯೂ ಕಾರ್ಯಚರಿಸಿ ಕೊಳೆತ ಸ್ಥಿತಿಯ ಮೃತದೇಹಗಳು ಸೇರಿದಂತೆ ನೂರಾರು ಹೆಣಗಳ ಸಾಗಿಸುವಿಕೆಗೆ ಪೊಲೀಸ್ ಇಲಾಖೆಯೊಂದಿಗೆ ಪೂರಕವಾಗಿ ಕೆಲಸ ನಿರ್ವಹಿಸಿ ಸಹಕರಿಸುತ್ತಿದ್ದರು,ಇತ್ತೀಚಿಗೆ ಕಾಡಿದ ಅನಾರೋಗ್ಯ ಸಮಸ್ಯೆಯಿಂದ ಹೆಚ್ಚಿನ ಸಮಾಜಸೇವೆ ಮುಂದುವರಿಸಲಾಗದೆ ಮನೆಯಲ್ಲಿ ಹಾಸಿಗೆ ಹಿಡಿದಿದ್ದ ಐಗಳ ಭಾನುವಾರ ಸ್ಪರ್ಗಸ್ಥರಾದರು.
ಉತ್ತಮ ಕೃಷಿಕರು ಆಗಿದ್ದ ಇವರು,ತಮ್ಮ ನೇರ ನಡೆ ನುಡಿಗಳಿಂದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿದ್ದರು.ಕೆಲ ರಾಜಕಾರಣಿಗಳು ಸೇರಿದಂತೆ ಇತರರ ವೈಫಲ್ಯಗಳನ್ನು ನೇರವಾಗಿ ಖಂಡಿಸಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು.ಮೃತರು ,ಮಕ್ಕಳಾದ ವೀಣಾ,ನಿಶಾಕ,ಕಶನ್,ಪೂನಂ ಸೇರಿದಂತೆ ಬಂಧು-ಬಳಗ ತೊರೆದಿದ್ದಾರೆ.ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಸೇರಿದಂತೆ ಹಲವರು ಮೃತರ ಅಂತಿಮ ದರ್ಶನ ಪಡೆದರು.
ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ