ಹೊನ್ನಾವರ :ಹಲ್ಲುಗಳ ಸ್ವಚ್ಚತೆ ಕಾಪಾಡಿಕೊಳ್ಳುವುದರ ಜೊತೆಗೆ ಸೊಪ್ಪು ತರಕಾರಿಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಸಾಧ್ಯ ಎಂದು ಹೊನ್ನಾವರದ ಪ್ರಸಿದ್ಧ ದಂತ ವೈದ್ಯರಾದ ಲಯನ್ ಡಾ.ನಾಗರಾಜ ಭೋಸ್ಕಿ ನುಡಿದರು. ಹೊನ್ನಾವರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ, ತಾಲೂಕಿನ ಹೆರಂಗಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆಹಾರ ಪದಾರ್ಥಗಳನ್ನು ಸೇವಿಸಿದ ಮೇಲೆ ಬಾಯಿಯನ್ನು ನೀರಿನಿಂದ ಮುಕ್ಕಳಿಸಬೇಕು.ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು,ಬೆಳಿಗ್ಗೆ ಮತ್ತು ರಾತ್ರಿ ತಪ್ಪದೇ ಬ್ರಷ್ ಮಾಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಇಂದಿನ ಜೀವನ ಶೈಲಿ ಬದಲಾವಣೆಯಿಂದ ಮಕ್ಕಳು ಸಿಹಿ ತಿಂಡಿಗಳು,ಬೇಕರಿ ತಿನಿಸು ಮುಂತಾದ ಜಂಕ್ ಪುಡ್ ಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಹಲ್ಲುಗಳು ಬೇಗ ಹಾಳಾಗುತ್ತಿವೆ.ಆದ್ದರಿಂದ ಶಿಬಿರದ ಮೂಲಕ ಮಕ್ಕಳಿಗೆ ಹಲ್ಲಿನ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದಲ್ಲದೇ,ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪೇಸ್ಟ್ ಮತ್ತು ಬ್ರಷ್ ಕೂಡಾ ವಿತರಿಸುತ್ತಿದ್ದೇವೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಿನೋದ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿ ಹೊನ್ನಾವರ ಲಯನ್ಸ್ ಕ್ಲಬ್ ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎನ್ನುತ್ತಾ,ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಮೋದ್ ನಾಯ್ಕ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೊಚರೇಕರ್ ಮಾತನಾಡಿದರು.ಝೋನ್ ಚೆರ್ ಪರ್ಸನ್ ಎಮ್.ಜೆ.ಎಪ್ ಲಯನ್ ರಾಜೇಶ ಸಾಳೇಹಿತ್ತಲ್,ಲಯನ್ಸ್ ಕ್ಲಬ್ ಸದಸ್ಯರಾದ ಎಮ್.ಜೆ.ಎಪ್ ಲಯನ ಡಾ.ಸುರೇಶ ಎಸ್,ಲಯನ್ ಶಾಂತಾರಾಮ ನಾಯ್ಕ,ಲಯನ್ ಶೇಖರ ನಾಯ್ಕ ಉಪಸ್ಥಿತರಿದ್ದರು. ಕುಮಾರಿ ಅಕ್ಷತಾ ಸಂಗಡಿಗರು ಪ್ರಾರ್ಥಿಸಿದರು.ಶಿಕ್ಷಕಿ ಶ್ರೀಮತಿ ಸಾವಿತ್ರಿ ಹೆಗಡೆ ಸ್ವಾಗತಿಸಿದರು. ಮಾಲತಿ ಹೆಗಡೆ ನಿರೂಪಿಸಿದರು.ಮುಖ್ಯಾಧ್ಯಾಪಕರಾದ ಶ್ರೀಮತಿ ಮೀನಾಕ್ಷಿ ಆಗೇರ ವಂದಿಸಿದರು.