ಕುಮಟಾ : ಸಂಕುಚಿತ ಮನೋಭಾವವನ್ನು ತೊರೆದು ಜಾತಿ, ಮತ, ಧರ್ಮ ಬೇಧವನ್ನು ಮರೆತು ದೇಶಾಭಿಮಾನದೊಂದಿಗೆ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕೆಂದು ಬೆಳಕು ಸೇವಾ ಟ್ರಸ್ಟ್ನ ಅಧ್ಯಕ್ಷ, ನಿವೃತ್ತ ಅರಣ್ಯಾಧಿಕಾರಿ ತೊರ್ಕೆಯ ನಾಗರಾಜ ನಾಯಕ ಕರೆ ನೀಡಿದರು.
ಅವರು ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಇಂದು ಕತಗಾಲದ ಎಸ್‌ಕೆಪಿ ಹೈಸ್ಕೂಲಿನ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಎನ್ನುವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ ಆರ್ ಭಾರತಿ ಜ್ಞಾನದಿಂದ ಮಾತ್ರ ಸ್ವಚ್ಛ, ಸದೃಢ, ಸುಂದರ ಭಾರತವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ 22 ವರ್ಷಗಳ ಕಾಲ ದೇಶ ರಕ್ಷಣೆಗಾಗಿ ದುಡಿದ ನಿವೃತ್ತ ಸೈನಿಕ ಸ್ಥಳೀಯ ಉಪ್ಪಿನಪಟ್ಟಣದ ನಿವಾಸಿ ಶ್ರೀಧರ ಅಂಬಿಗರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕ ಎಸ್ ಎಸ್ ಕೊರವರ ವಹಿಸಿದ್ದರು.
ಪ್ರಾರಂಭದಲ್ಲಿ ಕು ಶಾಂಭವಿ ಎಚ್ ಅಂಬಿಗ ದೈವೀ ಸ್ತುತಿಯೊಂದಿಗೆ ದೇಶಭಕ್ತಿ ಗೀತೆ ಹಾಡಿದರು. ಶಾಲಾ ಕನ್ನಡ ಶಿಕ್ಷಕ ಅಶೋಕ ಭಟ್ ಸ್ವಾಗತಿಸಿದರು. ಶಿಕ್ಷಕಿ ಮಂಗಲಾ ಶೆಟ್ಟಿ ವಂದಿಸಿದರು. ನಿಲೇಶ ಎನ್ ಅಂಬಿಗ, ಗೌರೀಶ ಎಮ್ ಅಂಬಿಗ, ಜ್ಯೋತಿ ಎಸ್ ದೇಶಭಂಡಾರಿ ಸಹಕರಿಸಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ಕುಮಟಾ