Important
Trending

ವೀರ ಸಾವರ್ಕರ ನಾಮಫಲಕ ಮತ್ತು ಹನುಮಧ್ವಜ ತೆರವು: ಎಲ್ಲೆಡೆ ಪೊಲೀಸ್ ಭದ್ರತೆ

ಭಟ್ಕಳ: ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿಯ ತೆಂಗಿನಗುAಡಿ ಬೀಚ್ ಬಳಿ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಸೋಮವಾರ ಅಳವಡಿಸಿದ್ದ ವೀರ ಸಾವರ್ಕರ ನಾಮಫಲಕ ಮತ್ತು ಹನುಮಧ್ವಜ ಬೆಳಗಾಗುವುದರೊಳಗೆ ತೆರವುಗೊಳಿಸಲಾಗಿದೆ.
ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಹೆಬಳೆ ಗ್ರಾಮ ಪಂಚಾಯತ ಪಿಡಿಓ ಮಂಜುನಾಥ ಗೊಂಡ ಸಮ್ಮುಖದಲ್ಲಿ ವಿವಾದಿತ ನಾಮಫಲಕ ಮತ್ತು ಧ್ವಜವನ್ನು ತೆರವುಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಭಟ್ಕಳ ಡಿವೈಎಸ್ಪಿ, ಸರ್ಕಲ್ ಇನ್ಸಪೆಕ್ಟರ್ ಮತ್ತು ಗ್ರಾಮೀಣ ಠಾಣೆ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಪೂರ್ವ ನಿನ್ನೆ ರಾತ್ರಿ ಮುರುಡೇಶ್ವರಕ್ಕೆ ಆಗಮಿಸಿ, ವಾಸ್ತವ್ಯ ಹೂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ ಡಿವೈಎಸ್ಪಿ ಅವರಿಂದ ಪ್ರಕರಣದ ಬಗ್ಗೆ ಚರ್ಚಿಸಿದ್ದರು.

ನಾಮಫಲಕ, ಹನುಮಧ್ವಜ ತೆರವುಗೊಳಿಸಿರು ವಿವಾದಿತ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಎರಡು ಕೆ ಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಗ್ರಾಮೀಣ ಠಾಣೆಯ ಜೀಪ್ ಕೂಡ ಸ್ಥಳದಲ್ಲಿದ್ದು, ಸ್ಥಳೀಯ ಪೊಲೀಸರು ಕೂಡ ಪಹರೆಯಲ್ಲಿದ್ದಾರೆ. ಈ ಪ್ರದೇಶದಲ್ಲಿ ಜನ ಸಂಚಾರ ಕಡಿಮೆಯಾಗಿದೆ. ಸನಿಹದ ಸೊಸೈಟಿ, ಅಂಗಡಿಗಳನ್ನು ತೆರೆದಿದ್ದರೂ ಜನರ ಓಡಾಟವಿಲ್ಲದೆ ಬಿಕೋ ಎನ್ನುವಂತಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button