ಕುಮಟಾ: ವಿದ್ಯಾರ್ಥಿಗಳಿಗೆ ಸಮಯ ಅತೀ ಮುಖ್ಯವಾದುದು ಸೆಕೆಂಡ್-ಸೆಕೆoಡ್ಗಳೂ ಸಹ ಅತ್ಯಮೂಲ್ಯ ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಹಾಗೂ ಸಮಯ ಅತೀ ಮುಖ್ಯ. ಗಿಡವನ್ನು ನೆಡುವುದಕ್ಕಿಂತ ಅದನ್ನು ಬೆಳೆಸುವ ಜವಬ್ದಾರಿ ಮಹತ್ವದಾಗಿರುತ್ತದೆ” ಎಂದು ಸವಿ ಪೌಂಡೇಶನ್ ಅಧ್ಯಕ್ಷರಾದ ಡಾ. ಶ್ರೀ ಸಂದೀಪ ಜೆ ನಾಯಕ ನುಡಿದರು. ಅವರು ತಾಲೂಕಿನ ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ಸವಿ ಪೌಂಡೇಶನ್ ಮೂಡಬಿದ್ರೆ ಹಾಗೂ ಪ್ರಕೃತಿ ಇಕೋ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವನ ಮಹೋತ್ಸವ ಮತ್ತು ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ. ಎನ್. ನಾಯಕರವರು ಪ್ರಕೃತಿಯನ್ನು ವಿಕೃತಿಯನ್ನಾಗಿಸಬಾರದು ಪರಿಸರವನ್ನು ಸುಸ್ಥಿರ ಮಾಡಬೇಕು. ಬೀಳುವ ಮಳೆಯನ್ನು ಸಂಗ್ರಹಿಸಿ ಅಂತರ್ಜಲ ಹೆಚ್ಚುವಂತೆ ಮಾಡಬೇಕು. ಅಲ್ಲದೇ ಮಾನವ ಪ್ರಕೃತಿಯ ಕೂಸು ಅನುಭವದ ಮಾತಿದು. ಈ ಸ್ಥಾನ ಅವನಿಗೆ ಪ್ರಾಪ್ತವಾಗಿರುವುದು ಅವನ ಮಾನವೀಯತೆಯಿಂದಲ್ಲ. ಬದಲಾಗಿ ಪರಿಸರದ ಕೊಡುಗೆಯಿಂದಾಗಿ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಎನ್ ರಾಮು ಹಿರೇಗುತ್ತಿ “ಪರಿಸರ ಮಾತೆ ಈಗ ಮನುಷ್ಯನ ಪೀಡೆಯನ್ನು ಸಹಿಸಿಕೊಳ್ಳುತ್ತಿರಬಹುದು, ಅದು ತಿರುಗಿ ನಿಂತಿತೆoದಾದರೆ ಮನುಷ್ಯ ಕುಲದ ಅಳಿವಿಗೆ ಅರೆಕ್ಷಣ ಸಾಕು ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕಾಗಿದೆ ಹಾಗೂ ಸವಿ ಫೌಂಡೇಶನ್ ಉದ್ದೇಶಗಳು, ಕಾರ್ಯಕ್ರಮದ ಉದ್ದೇಶ, ಪುನರಾವಲೋಕನ, ಕಾರ್ಯಸಾಗಿ ಬಂದ ಸಿಂಹಾವಲೋಕನ, ಸಾಗಿದ ದಾರಿಗಳ ಬಗ್ಗೆ ತಿಳಿಸಿದರು.
ಸವಿ ಫೌಂಢೇಶನ್ ಟ್ರಸ್ಟೀ ಹಾಗೂ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕುಮಟಾದ ವಿಶ್ರಾಂತ ಪ್ರಿನ್ಸಿಪಾಲ್ ರತನ್ ಗಾಂವಕರರವರು ಮಾತನಾಡಿ “ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶಾಲಾ ಪರಿಸರವನ್ನು ಸ್ವಚ್ಛವಾಗಿಡುವಂತೆ ನಾವು ದಿನನಿತ್ಯದ ಬಳಕೆಯಲ್ಲಿ ಉಪಯೋಗಿಸಿದ ಪ್ಲಾಸ್ಟಿಕನ್ನು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಸರಿಯಾಗಿ ವಿಲೇವಾರಿ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು”.
ಮುಖ್ಯಾಧ್ಯಾಪಕ ರೋಹಿದಾಸ ಎಸ್. ಗಾಂವಕರರವರು “ಈ ಪರಿಸರದಲ್ಲಿ ಅಂದ ಉಂಟು, ಚೆಂದ ಉಂಟು ಈ ಪ್ರಕೃತಿಯನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದೇ ಆದರೆ ಅಮರತ್ವವು ಉಂಟು, ಈ ಲೋಕ ನಾಕವಾಗಬೇಕೆ, ಹೊರತು ನರಕವಾಗಬಾರದು” ಎಂದರು.
ಶಿಕ್ಷಕ ಮಹಾದೇವ್ ಗೌಡ ಇವರು ಪರಿಸರದ ಕುರಿತು ವನಮಹೋತ್ಸವದ ಬಗ್ಗೆ ತಿಳಿಸಿ ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಪರಿಸರ ಸಂರಕ್ಷಿಸುವಲ್ಲಿ ದಿನನಿತ್ಯದ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಜವಬ್ದಾರಿ ವಿಷಯದ ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕೃತಿಕಾ ಮಹೇಶ ಭಟ್ ಸಿ.ವಿ.ಎಸ್.ಕೆ ಹೈಸ್ಕೂಲ್ ಕುಮಟಾ, ದ್ವಿತೀಯ ಸ್ಥಾನ ನಿರೀಕ್ಷಾ ಡಿ ನಾಯಕ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ, ತೃತೀಯ ಸ್ಥಾನ ಜ್ಯೋತಿ ಬಾಲಚಂದ್ರ ನಾಯ್ಕ ಜನತಾ ವಿದ್ಯಾಲಯ ಮಿರ್ಜಾನ, ಸಮಾಧಾನಕರ ಬಹುಮಾನ ಸ್ನೇಹಾ ಉದಯ ನಾಯ್ಕ ಸಿ.ವಿ.ಎಸ್.ಕೆ ಹೈಸ್ಕೂಲ್ ಕುಮಟಾ, ಹರ್ಷಾ ಮಹಾಬಲೇಶ್ವರ ಭಂಡಾರಿ ಡಿ.ಜೆ.ವಿ.ಎಸ್. ದಿವಗಿ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ ಬಿ. ಕೆರೆಮನೆ, ಸದಸ್ಯರಾದ ಎನ್.ಟಿ.ನಾಯಕ, ವಿವಿಧ ಶಾಲೆಯ ಶಿಕ್ಷಕರಾದ ಉದಯ ನಾಯ್ಕ, ಉಮಾ ಹೆಗಡೆ, ವಿಜಯಾ ಕಡವಿನಬಾಗಿಲು, ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ್, ನಾಗರಾಜ ನಾಯಕ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಬಿ.ಇಡಿ ಪ್ರಶಿಕ್ಷಣಾರ್ಥಿ ಎಮ್.ಎಚ್ನಿಶಾ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಉಪಸ್ಥಿತರಿದ್ದರು.
ಹೈಸ್ಕೂಲಿನ ವಿದ್ಯಾರ್ಥಿನಿ ಚೈತನ್ಯ ಸಂಗಡಿಗರು ಪ್ರಾರ್ಥಿಸಿದರು. ಶಾಲೆಯ ವಿದ್ಯಾರ್ಥಿ ಎನ್.ಡಿ.ನಂದನಕುಮಾರ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿ ಶಿವಪ್ರಸಾದ ಆರ್ ನಾಯಕ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಪ್ರೀತಿ ಆರ್ ನಾಯಕ ವಂದಿಸಿದರು.