Taluk Panchayat Program: ತಾಲೂಕಾ ಪಂಚಾಯತ ಜಮಾಬಂದಿ ಕಾರ್ಯಕ್ರಮ
ಮೊಬೈಲ್ ನಲ್ಲಿ ನಾಡಗೀತೆ ಕೇಳಿಸಲು ಹೋಗಿ ಪೆಚ್ಚಾದ ಅಧಿಕಾರಿಗಳು
ಅಂಕೋಲಾ : 2022-23ನೇ ಸಾಲಿನ ತಾಲೂಕು ಪಂಚಾಯತ್ ಜಮಾಬಂದಿ ಕಾರ್ಯಕ್ರಮವನ್ನು ( Taluk Panchayat Program) ತಾ.ಪಂ. ಆಡಳಿತಾಧಿಕಾರಿ ನಾಗೇಶ ರಾಯ್ಕರ ಹಾಗೂ ಜಮಾಬಂದಿ ಅಧಿಕಾರಿಗಳಾದ ಜಿ. ಪಂ ಯೋಜನಾಧಿಕಾರಿ ವಿನೋದ ಅಣ್ವೇಕರ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ನಡೆಯಿತು. ತಾ.ಪಂ. ಸಭಾಂಗಣದಲ್ಲಿ ಆಗಸ್ಟ್ 23 ರಂದು ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ತಾಲೂಕಿನ ನಾನಾ ಇಲಾಖೆಗಳ ವ್ಯಾಪ್ತಿಯ ವಿವಿಧ ಯೋಜನೆಗಳ ಕಾಮಗಾರಿ ಪ್ರಗತಿ ವರದಿ ಪರಿಶೀಲಿಸಿ ಸಂಬಂಧಿತ ಇಲಾಖೆಯವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ತಾಲೂಕು ಪಂಚಾಯತ ಹಾಗೂ ವಿವಿಧ ಇಲಾಖೆಗಳಲ್ಲಿ ಲೆಕ್ಕ ಶೀರ್ಷಿಕೆವಾರು ಅನುದಾನ ಬಿಡುಗಡೆ ಹಾಗೂ ಖರ್ಚಿನ ಕುರಿತಾದ ಪರಿಶೀಲನೆ ನಡೆಸಲಾಯಿತು.
2022-23 ನೇ ಸಾಲಿನಲ್ಲಿ ತಾ.ಪಂ. ಹಾಗೂ ವಿವಿಧ ಇಲಾಖೆಗಳ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕೆ 7041.99 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 6278.59 ಲಕ್ಷ ರೂ. ಖರ್ಚಾಗಿ 763.40 ಲಕ್ಷ ರೂ. ಉಳಿಕೆಯಾಗಿದೆ ಎಂದು ತಾ.ಪಂ. ಪ್ರಭಾರಿ ಕಾರ್ಯ ನಿರ್ವಹಣಾಧಿಕಾರಿ ಸುನಿಲ ಎಂ ವಿವರಿಸಿದರು. ಈ ವೇಳೆ ತಾ.ಪಂ. ಆಡಳಿತಾಧಿಕಾರಿ ನಾಗೇಶ ರಾಯ್ಕರ ಮಾತನಾಡಿ ಇಲಾಖಾವಾರು ಅನುದಾನ ಹಂಚಿಕೆಯಾದ ಪ್ರಕಾರ ಎಲ್ಲೆಲ್ಲಿ ಕಾಮಗಾರಿಗಳು ನಡೆದಿವೆ ಎನ್ನುವದನ್ನು ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಬೇಕು. ಒಂದು ವೇಳೆ ಅಪೂರ್ಣ ಅಥವಾ ಕಳಪೆ ಕಾಮಗಾರಿ ಕಂಡುಬಂದರೆ ಕೂಡಲೆ ಕ್ರಮ ವಹಿಸಬೇಕು ಮತ್ತು ಮುಂದಿನ ಕಾಮಗಾರಿಗಳಿಗಾಗಿ ಸರಿಯಾದ ಕ್ರಿಯಾ ಯೋಜನೆಯನ್ನು ರೂಪಿಸಬೇಕು.
ಹಾಗೂ ಇಲಾಖಾವಾರು ಬಿಡುಗಡೆಯಾದ ಅನುದಾನದ ಕುರಿತು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸರಕಾರದ ಯಾವುದೇ ಅನುದಾನ ವ್ಯರ್ಥವಾಗದಂತೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಅನುದಾನದ ಸದ್ಬಳಕೆ ಆಗಬೇಕು ಎಂದು ತಿಳಿಸಿದರು. ಅಂಕೋಲಾ ತಾಲೂಕಾ ಪಂಚಾಯತ ಜಮಾಬಂದಿ ಅಧಿಕಾರಿಯಾಗಿ ಆಗಮಿಸಿದ್ದ, ಜಿ.ಪಂ. ಯೋಜನಾಧಿಕಾರಿ ವಿನೋದ ಅಣ್ವೇಕರ ಮಾತನಾಡಿ, ವೈದ್ಯಕೀಯ ವೆಚ್ಚ ಮರುಪಾವತಿ ಹಣ ಶಿಲ್ಕು ಉಳಿದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ,ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಬೇಡಿಕೆ ಅರ್ಜಿ ಬಂದಾಗ ಅದನ್ನು ವಿಳಂಬ ಮಾಡದೆ ತ್ವರಿತ ವಿಲೇವಾರಿ ಮಾಡಿ ಎಂದು ಎಚ್ಚರಿಸಿದರು.
ತಾ.ಪಂ. ವ್ಯಾಪ್ತಿಯ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ತಾ.ಪಂ. ಕಚೇರಿ ವ್ಯವಸ್ಥಾಪಕ ನೀಲಕಂಠ ನಾಯಕ, ಸಹಾಯಕ ಲೆಕ್ಕಾಧಿಕಾರಿ ಶ್ರೀಮಂತಿ ಎಸ್ ನಾಯ್ಕ, ಪ್ರಥಮ ದರ್ಜೆ ಲೆಕ್ಕ ಸಹಾಯಕಿ ರವಿಕಲಾ ಗೌಡ, ದ್ವಿ.ದರ್ಜೆ ಲೆಕ್ಕ ಸಹಾಯಕ ನಾಗರಾಜ ನಾಯ್ಕ, ಬೆರಳಚ್ಚುಗಾರ್ತಿ ಮಹಾದೇವಿ ಗೌಡ ಮತ್ತಿತರ ಸಿಬ್ಬಂದಿಗಳು ಸಹಕರಿಸಿದರು.ತಾ.ಪಂ. ವಸತಿ ಗೃಹಗಳಲ್ಲಿ ಇರುವ ವಿವಿಧ ಇಲಾಖೆಗಳ ಅಧಿಕಾರಿಗಳೇ ಬಾಡಿಗೆ ಬಾಕಿ ಇರಿಸಿಕೊಂಡಿದ್ದಾರೆ ಎಂಬ ಸ್ವಾರಸ್ಯಕರ ವಿಚಾರ ಚರ್ಚೆಗೆ ಬಂದು, ವಸತಿ ಗೃಹಗಳಿಂದ ಬರಬೇಕಿದ್ದ ಒಟ್ಟೂ ಬಾಡಿಗೆ 1ಲಕ್ಷ 85 ಸಾವಿರ ರೂಪಾಯಿಗಳಲ್ಲಿ ಕೇವಲ ರೂ.15 ಸಾವಿರ ಮಾತ್ರ ಜಮ ಬಂದಿದ್ದು ರೂ.1 ಲಕ್ಷ 70 ಸಾವಿರ ಬಾಕಿ ಬರಬೇಕಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ( Taluk Panchayat Program) ಸಭಾ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಹಾಡಲು ಎಲ್ಲರೂ ಎದ್ದು ನಿಂತ ವೇಳೆ ತಾ.ಪಂ ಸಿಬ್ಬಂದಿಗಳು ಧ್ವನಿವರ್ಧಕದ ಮುಂದೆ ಮೊಬೈಲ್ ಹಿಡಿದು, ರೆಕಾರ್ಡ್ ಆಗಿರುವ ನಾಡಗೀತೆ ಕೇಳಿಸಲು ಮುಂದಾದರಾದರೂ, ಅದೇಕೋ ಏನೋ ಕೆಲ ಸೆಕೆಂಡಿನಲ್ಲಿಯೇ ಮೊಬೈಲ್ ಹಾಡು ಸರಿಯಾಗಿ ಪ್ಲೇ ಆಗದೇ ಕೈ ಕೊಟ್ಟಿದ್ದರಿಂದ, ವೇದಿಕೆ ಮೇಲಿದ್ದ ಅಧಿಕಾರಿಗಳು ಸಹಿತ ಕೆಲವರು ಪೆಚ್ಚು ಮೋರೆಯಲ್ಲಿ ಸುಮ್ಮನೆ ನಿಂತಂತೆ ಕಂಡು ಬಂತು. ಈ ವೇಳೆ ಮುಜುಗರಕ್ಕೊಳಗಾದಂತಾದ ತಾ.ಪಂ ಪ್ರಭಾರಿ ಇ ಓ ಸುನೀಲ ಅವರು, ತಮ್ಮ ಸಿಬ್ಬಂದಿಗೆ ಲಘು ಧ್ವನಿಯಲ್ಲೇ ಗದರಿಸಿ, ಸರಿ ಸೆಟ್ ಮಾಡಿಟ್ಟುಕೊಳ್ಳಬೇಕೆಂದು ಹೇಳಿದ್ದು, ನಂತರ ಮೊಬೈಲ್ ದೋಷ ಸರಿಪಡಿಸಿಕೊಳ್ಳಲಾಯಿತು. ಅಧಿಕಾರಿ ತನ್ನ ಸಿಬ್ಬಂದಿಗಳಿಗೆ ಹೇಳಿದ್ದು ಆ ಸಂದರ್ಭಕ್ಕೆ ಸರಿ ಎನಿಸಬಹುದಾದರೂ ಸಹ ಇಲ್ಲಿ ಅಧಿಕಾರಿಗಳೂ ಸಹ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ.
ಒಂದೊಮ್ಮೆ ಮೊಬೈಲ್ ರೆಕಾರ್ಡ್ ಹಾಡು ಕೈಕೊಟ್ಟರೂ ದೇವರು ಕೊಟ್ಟ ಬಾಯಿಯಿಂದ ಹಾಡು ಮುಂದುವರೆಸಬಹುದಿತ್ತಲ್ಲವೇ ?. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ನಾಡು – ನುಡಿ ಮತ್ತಿತರ ಗೌರವಕ್ಕೆ ಕುಂದು ಬಾರದಂತೆ ಇನ್ನು ಮುಂದಾದರೂ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತುಕೊಂಡು,ಮುಂಜಾಗ್ರತೆ ವಹಿಸುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ