Important
Trending

ಮನೆಗೆ ಬಂದ ಬೃಹತ್ ಹೆಬ್ಬಾವು: ಯಶಸ್ವಿ ಕಾರ್ಯಾಚರಣೆ

ಅಂಕೋಲಾ: ಪಾಂಡುಪುರ ಹೊಳೆಯ ರಾಷ್ಟೀಯ ಹೆದ್ದಾರಿ ಸೇತುವೆ ಹತ್ತಿರದ ಮನೆಯೊಂದರ ಬಳಿ ನುಗ್ಗಿ ಕೋಳಿಯನ್ನು ಸಾಯಿಸಿದ್ದಲ್ಲದೇ, ಬೂದಿ ಮತ್ತಿತರ ತ್ಯಾಜ್ಯರಾಶಿಯ ಬಳಿ ಅವಿತುಕೊಂಡಿದ್ದ ಸುಮಾರು 12 ಅಡಿ ಉದ್ದದ ಹೆಬ್ಬಾವನ್ನು ಹಿಡಿದ ಉರಗ ಸಂರಕ್ಷಕ ಮಹೇಶ ನಾಯ್ಕ ಸ್ಥಳೀಯರ ಆತಂಕ ದೂರ ಮಾಡಿದರು ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಪಾಂಡುಪುರ ಹೊಳೆಯ ಸೇತುವೆ ಹತ್ತಿರದ ಮನೆಯೊಂದರ ಹಿಂಬದಿ ಅವರಣದಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಮನೆಯವರು ಮತ್ತು ಅಕ್ಕಪಕ್ಕದವರ ಆತಂಕಕ್ಕೆ ಕಾರಣವಾಗಿತ್ತು.

ಅದೆಲ್ಲಿಂದಲೋ ಬಂದ ಹೆಬ್ಬಾವು ಮನೆಯವರು ಸಾಕಿದ್ದ ಕೋಳಿಯನ್ನು ನುಂಗುವ ಯತ್ನ ಮಾಡಿ ಕೋಳಿಯನ್ನು ಸಾಯಿಸಿತ್ತು.ಸಂಜೆಯ ವೇಳೆಗೆ ಜೀವಂತವಾಗಿದ್ದ ಕೋಳಿ ರಾತ್ರಿ ಬೆಳಗಾಗುವುದರೊಳಗೆ ಸತ್ತು ಬಿದ್ದಿರುವುದನ್ನು ಕಂಡು ಕಾರಣವೇನಿರಬಹುದು ಎಂದು ಹುಡುಕಲು ಹೊರಟ ಹಟ್ಟಿಕೇರಿಯ ರಮೇಶ ಪಾಂಡುರಂಗ ನಾಯ್ಕ ಕುಟುಂಬ ವರ್ಗದವರು ಹೆಬ್ಬಾವು ಕಂಡು ಕ್ಷಣ ಕಾಲ ಹೌಹಾರುವಂತಾಗಿತ್ತು. ಆತಂಕಗೊಂಡ ಮನೆಯವರು ಹೆಬ್ಬಾವು ಬಂದಿರುವ ವಿಷಯವನ್ನು ತಮ್ಮ ಕುಟುಂಬ ಸಂಬಂಧಿ ಮತ್ತು ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರಿಗೆ ಫೋನ್ ಕರೆ ಮಾಡಿ ತಿಳಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ತನ್ನ ಮಗ ಗಗನ ನಾಯ್ಕ ಮತ್ತು ಸ್ಥಳೀಯರಾದ ಹರೀಶ್ಚಂದ್ರ ಮತ್ತಿತರರ ಸಹಕಾರದಲ್ಲಿ ಹೆಬ್ಬಾವು ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ .ಬೂದಿ ಮತ್ತಿತರ ತ್ಯಾಜ್ಯಗಳನ್ನು ಪಕ್ಕಕ್ಕೆ ಸರಿಸಲು ಶುರು ಮಾಡಿದಾಗ ರಾಶಿಯ ಕೆಳಗೆ ಅವಿತುಕೊಂಡಿದ್ದ ಹೆಬ್ಬಾವು ಅಲ್ಲಿಂದ ನಿಧಾನವಾಗಿ ಚಲಿಸಲು ಮುಂದಾಗಿದೆ. ಬೆತ್ತದ ಕೋಲಿನ ಮುಂಬದಿ ಭಾಗದ ರಿಂಗಿನಲ್ಲಿ ಹೆಬ್ಬಾವಿನ ಮುಖ ತೂರಿಸಲು ಯತ್ನಿಸಿದ ಮಹೇಶ ನಾಯ್ಕ ಪ್ರಯಾಸ ಪಟ್ಟು ಹಾವಿನ ಬಾಲ ಹಿಡಿದು, ನಿಧಾನವಾಗಿ ಹೆಬ್ಬಾವನ್ನು ಮೇಲೆತ್ತುತ್ತ ಮನೆಯ ಸಂದಿ ಗೊಂದಿಯಲ್ಲಿ ಸಾಗುತ್ತ ಬಂದಿದ್ದಾರೆ.

python rescue

ಈ ವೇಳೆ ಹೆಬ್ಬಾವು ಮತ್ತೆ ಮತ್ತೆ ತಪ್ಪಿಸಿಕೊಳ್ಳಲು ನೋಡಿದೆ. ಅದಕ್ಕೆ ಅವಕಾಶ ನೀಡದ ಮಹೇಶ ನಾಯ್ಕ ,ಇಕ್ಕಟ್ಟಾದ ಪ್ರದೇಶದಿಂದ ಹೆಬ್ಬಾವನ್ನು ಮನೆಯ ಅಂಗಳದವರೆಗೆ ತಂದಿದ್ದಾರೆ. ಈ ವೇಳೆ ಸುಮಾರು 12 ಅಡಿ ಉದ್ದದ ಹೆಬ್ಬಾವನ್ನು ಸ್ಥಳೀಯ ಕೆಲವರು ಕುತೂಹಲದಿಂದ ನೋಡಿದರೆ,ಇನ್ನು ಕೆಲವರು ಚಿಕ್ಕ ಪುಟ್ಟ ಮಕ್ಕಳು ಆಟ ಆಡಿಕೊಂಡಿರುವ ಪ್ರದೇಶದಲ್ಲಿ ಈ ಹೆಬ್ಬಾವಿನಿಂದ ಅಪಾಯದ ಸಾಧ್ಯತೆ ಇತ್ತು ಎಂದು ಆತಂಕ ಹೊರ ಹಾಕಿದರು. ಅಂಗಳದಲ್ಲಿ ಮನೆಯ ಮೆಟ್ಟಿಲೇರಿ ಮುಂದೆ ಸಾಗಲು ಯತ್ನಿಸಿದ ಹೆಬ್ಬಾವನ್ನು ಮಹೇಶ ನಾಯ್ಕ ಲೀಲಾಜಾಲವಾಗಿ ಚೀಲ ಸೇರುವಂತೆ ಮಾಡಿದರು.

ಈ ವೇಳೆ ಮಹೇಶ್ ನಾಯ್ಕ,ಉರಗ ಸಂರಕ್ಷಣೆಯ ತಮ್ಮ ದೀರ್ಘಾವಧಿ ಅನುಭವ ಬಳಸಿಕೊಂಡಂತಿತ್ತು. ಹಾವು ನಿಧಾನವಾಗಿ ಚೀಲ ಸೇರುತ್ತಿದ್ದಂತೆ ಚೀಲ ಮೇಲೆತ್ತಿ ನಂತರ ಮನೆಯ ಯಜಮಾನ ನೀಡಿದ ಗಟ್ಟಿ ದಾರದಿಂದ ಚೀಲದ ಬಾಯಿ ಭದ್ರಪಡಿಸಿದರು. ಅತೀ ಉದ್ದ ಮತ್ತು ಬಲು ಭಾರದ ಹೆಬ್ಬಾವನ್ನು ಸಾಗಿಸಿ ,ಅರಣ್ಯ ಇಲಾಖೆಯವರಿಗೊಪ್ಪಿಸಿ ಅವರ ಮೂಲಕ ಹೆಬ್ಬಾವನ್ನು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು ಎನ್ನಲಾಗಿದೆ.

ಪಾಂಡುಪುರ ಹೊಳೆಯ ನೀರಿನ ಸೆಳೆತ ಮತ್ತಿತರ ಕಾರಣದಿಂದ ಹೆಬ್ಬಾವು ತೇಲಿ ಬಂದು ಜನವಸತಿ ಪ್ರದೇಶಕ್ಕೆ ನುಗ್ಗಿರುವ ಸಾಧ್ಯತೆ ಕೇಳಿ ಬಂದಿದ್ದು ದೊಡ್ಡ ಗಾತ್ರದ್ದಾಗಿರುವ ಈ ಹೆಬ್ಬಾವು ತೂಕದಲ್ಲಿ ಸುಮಾರು 30 ಕೆ.ಜಿ ಭಾರವಾಗಿದೆ ಎಂದು ಮಹೇಶ ನಾಯ್ಕ ತಿಳಿಸಿದರು . ಒಟ್ಟಿನಲ್ಲಿ ಹೆಸರಿಗೆ ತಕ್ಕಂತೆ ಭಾರೀ ಗಾತ್ರ ಹೊಂದಿರುವ ಈ ಹೆಬ್ಬಾವು ಕಾಡು ಬಿಡು ನಾಡಿಗೆ ಬಂದು ಮತ್ತೆ ಕಾಡು ಸೇರುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button