Important
Trending

ಹಿಂಬದಿಯಿಂದ ಬಂದ ಬಸ್ ಚಕ್ರ ಹತ್ತಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ: ಲಾರಿ ಬಡಿದು ಹೆದ್ದಾರಿಯಲ್ಲಿ ಸಿಡಿದುಬಿದ್ದಿದ್ದ ವೇಳೆ ನಡೆಯಿತು ದುರಂತ

ಅಂಕೋಲಾ : ಲಾರಿ, ಬೈಕಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ  ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮ ವ್ಯಕ್ತಿ  ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಕಾರವಾರ ತಾಲೂಕಿನ ಬೈತಕೋಲ ಘಟ್ಟ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಸಂಭವಿಸಿದೆ. ಬೈಕ್ ಸವಾರ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲಿಗದ್ದೆ ಶಿರಗುಂಜಿ ನಿವಾಸಿ ಜೀತೇಂದ್ರ ಅನಂತ ಗೌಡ(24) ಮೃತ ದುರ್ದೈವಿ ಯುವಕ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ. ಮೃತ ಜಿತೇಂದ್ರ ಹಸನ್ಮುಖಿ ಯುವಕನಾಗಿದ್ದು ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದ . ಇತ್ತೀಚೆಗಷ್ಟೇ ಹೊಸ ಕೆಟಿಎಮ್ ಡ್ಯುಕ್ ಬೈಕ್ ಖರೀದಿಸಿದ್ದ ಈತ ಜೀವನದಲ್ಲಿ ಹಲವು ಕನಸು ಕಂಡಿದ್ದು, ಅದು ನನಸಾಗುವ ಮುನ್ನವೇ ಅತಿ ಕಿರಿಯ ವಯಸ್ಸಿನಲ್ಲಿಯೇ ಕಾಲ ವಶವಾಗಿರುವುದು ದುರಂತವೇ ಸರಿ.

ಕಾರವಾರ ಕಡೆಯಿಂದ ಅಂಕೋಲಾ ಕಡೆ ಹೋಗುತ್ತಿದ್ದ ಕ್ಯಾಂಟರ್ ವಾಹನ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಬೈತಕೋಲ ಘಟ್ಟದ ನೀರಿನ ಟ್ಯಾಂಕ್ ಬಳಿ ಅಂಕೋಲಾ ಕಡೆಯಿಂದ ಕಾರವಾರ ಕಡೆ ಬರುತ್ತಿದ್ದ ಬೈಕಿಗೆ ಮುಂದಿನ ಬಲಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ರಸ್ತೆ ಮೇಲೆ ಬಿದ್ದ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಅಂಕೋಲಾ ಕಡೆಯಿಂದ ಕಾರವಾರ ಕಡೆ ಅತಿ ವೇಗದಲ್ಲಿ ಬರುತ್ತಿದ್ದ ಬಸ್  ವೇಗ ನಿಯಂತ್ರಿಸಲು ಸಾಧ್ಯವಾಗದೇ ಅಪಘಾತದಲ್ಲಿ ರಸ್ತೆ ಮೇಲೆ ಬಿದ್ದ ಜೀತೇಂದ್ರ ಗೌಡ ಅವರ ಮೇಲೆ ಹರಿದಿದ್ದು , ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. 

ಸುಸಂಸ್ಕೃತ ಕುಮುಂಬದಲ್ಲಿ ಜನಿಸಿದ್ದ ಜೀತೇಂದ್ರ ನ  ತಾಯಿ ಈ ಹಿಂದೆ ಅಗಸೂರು ಗ್ರಾಪಂ ಉಪಾಧ್ಯಕ್ಷೆಯಾಗಿದ್ದು, ಮೃತನ ಓರ್ವ ಸಹೋದರ ದೂರದ ಮಡಿಕೇರಿಯಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ ಎನ್ನಲಾಗಿದೆ. ಜೀತೆಂದ್ರ ಅಕಾಲಿಕ ಸಾವಿಗೆ ವಾಸರ ಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ , ಹೋಂ ಗಾರ್ಡ್ ಜಿಲ್ಲಾ ಕಮಾಂಡೆಂಟ್ ಡಾ. ಸಂಜು ನಾಯಕ ಸೇರಿದಂತೆ  ಇತರೆ ಸ್ಥಳೀಯ ಪ್ರಮುಖರು, ಊರ ನಾಗರಿಕರು ಸಂತಾಪ ಸೂಚಿಸಿದ್ದಾರೆ. 

ಎಂ.ಎಲ್. ಸಿ ಗಣಪತಿ ಉಳ್ವೇಕರ ನೇತೃತ್ವದಲ್ಲಿ ಹೆದ್ದಾರಿ ಸುರಂಗ ಮಾರ್ಗ (ಟನೆಲ್) ಸಾರ್ವಜನಿಕ ಸಂಚಾರಕ್ಕೆ ತೆರವುಗೊಳಿಸುವಂತೆ ಪ್ರತಿಭಟನೆ ನಡೆಯುತ್ತಿದ್ದ ವೇಳೆಯೇ,  ಹತ್ತಿರದ ಬೈತಖೋಲ ಬಳಿ  ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿರುವ ಸುದ್ದಿ ಕೇಳಿ, ಮತ್ತಷ್ಟು ಆಕ್ರೋಶಿತರಾದ ಪ್ರತಿಭಟನಾಕಾರರು ,ಹೆದ್ದಾರಿ ಸುಗಮ ಸಂಚಾರಕ್ಕೆ ಸರ್ಕಾರ ಗಂಭೀರ  ಚಿಂತನೆ ಮತ್ತು ಸೂಕ್ತ  ಕೈಗೊಳ್ಳುವಂತೆ ಆಗ್ರಹಿಸಿದರು.           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button