Follow Us On

WhatsApp Group
Important
Trending

ಕಾಸರಕೋಡ್ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಸರ್ವೆ ಪ್ರಯತ್ನ: ಮೀನುಗಾರರ ಬೃಹತ್ ಪ್ರತಿಭಟನೆ: ಅಧಿಕಾರಿಗಳೊಂದಿಗೆ ಮಾತಿನಚಕಮಕಿ, ಪರಿಸ್ಥಿತಿ ಉದ್ವಿಗ್ನ

ಹೊನ್ನಾವರ: ತಾಲೂಕಿನ ಕಾಸರಕೋಡ್ ನಲ್ಲಿ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಸರ್ವೆ ಗೆ ಮುಂದಾದ ಹಿನ್ನೆಲೆ ಮೀನುಗಾರರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಮೀನುಗಾರರು ಜಮಾವಣೆಗೊಂಡರು. ಪರಿಸ್ಥಿತಿ ಉದ್ವಿಗ್ನವಾಗಿದ್ದರಿಂದ, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.ಸಿಪಿಐ ಸಂತೋಷ್ ಕಾಯ್ಕಿಣಿ ನೇತ್ರತ್ವದಲ್ಲಿ ಪೊಲೀಸ್ ನೀಯೋಜನೆಯಾಗಿತ್ತು. ಇದೇ ವೇಳೆ ಎಸಿ ಡಾ.ನಯನಾ ಅವರು ಸರ್ವೆ ಕಾರ್ಯ ನಡೆಸಲು ಅನುವು ಮಾಡಿಕೊಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮೀನುಗಾರರರು ಅಧಿಕಾರಿಗಳ ಮಾತಿಗೆ ಜಗ್ಗದೆ ವಾಗ್ವಾದ ನಡೆಸಿದರು.

ಮೀನುಗಾರರ ಮುಖಂಡ ರಾಜು ತಾಂಡೇಲ್ ಮಾತನಾಡಿ, ಅನಾದಿಕಾಲದಿಂದಲೂ ಇಲ್ಲಿ ಮೀನುಗಾರರು ಬದುಕನ್ನು ಕಟ್ಟಿಕೊಂಡಿದ್ದಾರೆ,ಸರ್ಕಾರ ಮೊದಲು ನಮ್ಮ ಇರುವಿಕೆಯನ್ನು ಗುರುತಿಸಬೇಕು .ಈ ಹಿಂದೆ ಸರ್ಕಾರಿ ಅಧಿಕಾರಿಗಳು ಸರ್ವೆ ಕಾರ್ಯ ಎಂದು ಸ್ಥಳಕ್ಕೆ ಭೇಟಿ ನೀಡಿದ್ದರು. ರಸ್ತೆ ಮಾಡುವಾಗ ನಮ್ಮನ್ನೆಲ್ಲಾ ಬಂಧಿಸಿ ಜೈಲಲಿಟ್ಟಿದ್ದರು. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ, ನಮ್ಮ ಮುಂದಿನ ತಲೆಮಾರು ಇಲ್ಲಿ ಬದುಕು ಕಟ್ಟಿಕೊಳ್ಳಲು ವಾಣಿಜ್ಯ ಬಂದರು ವಿರೋಧಿಸಿ ನಾವು ಇಂದು ಹೊರಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಈ ಜಾಗದಲ್ಲಿ ಸರ್ವೆ ಮಾಡುತ್ತೇವೆ.ನಿಮಗೆ ಯಾವುದೇ ರೀತಿ ಮೋಸವಾಗುವುದಿಲ್ಲ. ಸರ್ಕಾರದ ಆದೇಶದ ಪ್ರಕಾರವಾಗಿ ನಾವು ಇಲ್ಲಿ ಸರ್ವೆಗೆ ಬಂದಿದ್ದೇವೆ.ಅವಕಾಶ ಮಾಡಿಕೊಡಿ ಎಂದು ಎಸಿ ಡಾ.ನಯನ ಅವರು ಮೀನುಗಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಸರ್ವೇ ಮಾಡಲು ಸೂಕ್ತ ದಾಖಲಾತಿ, ಆದೇಶ ಪ್ರತಿಯೊಂದಿಗೆ ಬನ್ನಿ ಎಂದು ಮೀನುಗಾರ ಗಣಪತಿ ತಾಂಡೇಲ್ ಎಸಿಯವರ ಬಳಿ ಹೇಳಿದರು. ಕೆಲಕಾಲ ಮೀನುಗಾರರು ಎಸಿಯವರ ನಡುವೆ ತೀವೃ ವಾಗ್ವಾದ ಮುಂದುವರೆಯಿತು. ಕೊನೆಗು ತಾವು ಸರ್ವೇ ಕಾರ್ಯ ನಡೆಸಿಯೇ ನಡೆಸುತ್ತೇವೆ ಎಂದು ಎಸಿಯವರು ಹೇಳಿದರು. ಮೀನುಗಾರರು ಜಾಗದಿಂದ ತೆರಳದೆ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ನೂರಾರು ಸಂಖೆಯ ಮೀನುಗಾರರು ಇದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button