ಕಾರವಾರಃ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಂಡಿಸಿದ ಬಜೆಟ್ ನಲ್ಲಿ ಎಲ್ಲ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ವಿಶ್ವ ಮಹಿಳೆಯರ ದಿನದಂದು ಮಹಿಳೆಯರಿಗೆ ಗಮನಾರ್ಹ ಕೊಡುಗೆ ನೀಡಿದ ಬಗ್ಗೆ ಮಹಿಳಾ ಶಾಸಕರಾಗಿ ತಾವು ಸಂತಸದಿಂದ ಸ್ವಾಗತಿಸುವುದಾಗಿ ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ಪ್ರತಿಕ್ರಿಯಿಸಿದ್ದಾರೆ.
ಕರಾವಳಿಯ ಖಾರಲ್ಯಾಂಡ್ ಯೋಜನೆಗೆ 300 ಕೋಟಿ ರೂ. ಕೊಡುಗೆ ನೀಡಿದ್ದಾರೆ. ತಮ್ಮ ಕ್ಷೇತ್ರದ ಉದ್ದಕ್ಕೂ ಇರುವ ಅರಬ್ಬಿ ಸಮುದ್ರದ ಉಪ್ಪು ನೀರು ಕಾಳಿ ಹಾಗೂ ಗಂಗಾವಳಿ ನದಿ ಅಳಿವೆಯ ಮೂಲಕ ರೈತರ ಹೊಲಗಳಿಗೆ ನುಗ್ಗಿ ಕೃಷಿ ಅಸಾಧ್ಯವಾಗಿ ರೈತರು ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ನಿವಾರಣೆಗೆ ಚಕ್ ಡ್ಯಾಂ, ಕಿಂಡಿ ಆಣೆಕಟ್ಟು ನಿರ್ಮಿಸುವಂತೆ ಸಣ್ಣ ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದ್ದೆ. ಆ ಬೇಡಿಕೆಯನ್ನು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಈಡೇರಿಸಿ, ರೈತರಿಗೆ ಅನುಕೂಲ ಕಲ್ಪಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಶಾಸಕರು ತಿಳಿಸಿದ್ದಾರೆ.
ಕರಾವಳಿ ಅಭಿವೃದ್ಧಿ ಮಂಡಳಿ, ಅಂಕೋಲಾ ವಾಯುನೆಲೆಯ ಸಿವಿಲ್ ಎನ್ ಕ್ಲೇವ್ ಅಭಿವೃದ್ಧಿ, ಕೃಷಿ, ಮೀನುಗಾರಿಕೆ, ಶಿಕ್ಷಣ, ಗೋ ಶಾಲೆ, ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕೊಡುಗೆ ನೀಡುವ ಮೂಲಕ ಅತ್ಯುತ್ತಮ ಬಜೆಟ್ ಮಂಡಿಸಿ ಜನಪರ ಕಾಳಜಿ ಮೆರೆದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಶ್ರೀಮತಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.