Big News
Trending

Subrahmanya Dhareshwara: ಯಕ್ಷಗಾನ ಲೋಕದ ಗಾನಕೋಗಿಲೆ, ಪ್ರಯೋಗಶೀಲ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಕಾರವಾರ: ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಹಾಗೂ ಜನಪ್ರಿಯ ಭಾಗವತ, ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಗಾನಕೋಗಿಲೆ ಖ್ಯಾತಿಯ ಸುಬ್ರಹ್ಮಣ್ಯ ಧಾರೇಶ್ವರ (67) ( Subrahmanya Dhareshwara) ಮುಂಜಾನೆ ಬೆಂಗಳೂರಿನ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಗಾನಕೋಗಿಲೆʼ ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಯೂರಿರುವ, ಭಾಗವತರ ಅಂತ್ಯಕ್ರಿಯೆ ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ.

ಉತ್ತರಕನ್ನಡದಲ್ಲಿ ಇದೆ ಉದ್ಯೋಗಾವಕಾಶ: ಪ್ರಸಿದ್ಧ ಶೋರೂಮ್ ನಲ್ಲಿ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

ಸದ್ಗುಣಿ, ಸಜ್ಜನ, ಮಿತಭಾಷಿಯಾಗಿದ್ದ ಧಾರೇಶ್ವರರು ಯಕ್ಷಗಾನಕ್ಕೆ ಕಾಳಿಂಗ ನಾವಡರ ಅನಂತರ ಭಾಗವತಿಕೆಗೆ ತಾರಾ ಮೌಲ್ಯ ತಂದಿದ್ದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾoತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳದ ತಿರುಗಾಟ ನಿಲ್ಲಿಸಿದ್ದರು.

( Subrahmanya Dhareshwara) ಸುಮಾರು 46 ವರ್ಷಗಳ ಸುದೀರ್ಘವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರು ಪ್ರಯೋಗಶೀಲ ಭಾಗವತರೆಂದೇ ಹೆಸರುವಾಸಿಯಾಗಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ 28 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು.

1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ನಂತರ ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಮೇಳ ಬಿಟ್ಟು 10 ವರ್ಷದ ಬಳಿಕವೂ ಅನಿವಾರ್ಯ ಸಂದರ್ಭದಲ್ಲಿ ಭಾಗವತರಾಗಿ ಕಲಾ ಸೇವೆ ಮಾಡಿ ಕಲಾವಿದರ ಮನ ಗೆದ್ದಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button