ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳಾ ಅಧಿಕಾರಿಯ ಮಾನಕ್ಕೆ ಕುಂದು ತರುವ ಯತ್ನ: ಆರೋಪಿ ಬಂಧನ| ಹಿಂದೆ ಉಪನ್ಯಾಸಕನಾಗಿದ್ದವನ ಮಾನಗೇಡಿ ಕೃತ್ಯ?

ಅಂಕೋಲಾ: ಮಹಿಳಾ ಅಧಿಕಾರಿಯೋರ್ವಳಿಗೆ ಈ ಹಿಂದಿನಿಂದಲೂ ಮಾನಸಿಕ ಕಿರುಕುಳ ನೀಡುತ್ತಿದ್ದದ್ದಲ್ಲದೇ, ತನ್ನ ಉದ್ಧಟತನ ಪ್ರದರ್ಶಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಮಾನಕ್ಕೆ ಕುಂದುತರಲು ಯತ್ನಿಸಿದ ಆರೋಪದಡಿ ವ್ಯಕ್ತಿಯೋರ್ವನನ್ನು ಅಂಕೋಲಾ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.

ಉದಯ ಮರ್ಕುಂಡಿ ನಾಯಕ(45) ಸಗಡಗೇರಿ, ಬಂಧಿತ ಆರೋಪಿಯಾಗಿದ್ದು, ಈತ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊನ್ನಾವರ ಮೂಲದ ಮಹಿಳಾ ಅಧಿಕಾರಿಯೋರ್ವರಿಗೆ ಈ ಹಿಂದಿನಿಂದಲೂ ಪ್ರೇಮ ಮತ್ತು ಮದುವೆ ಪ್ರಸ್ತಾಪ ಇಟ್ಟು ಹಲವಾರು ಬಾರಿ ಫೋನ್ ಕರೆ ಮಾಡಿ ಮಾನಸಿಕ ಕಿರುಕುಳ ನೀಡುವುದು,ತನ್ನ ಮನದಿಚ್ಚೆ ಪೂರೈಸುವಂತೆ ನಾನಾ ರೀತಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಈತನ ವಿಕೃತ ಮನಸ್ಸರಿತ ಮಹಿಳಾ ಅಧಿಕಾರಿ ಈ ಮೊದಲು ಸಮಾಧಾನ ದಿಂದಲೇ ಆತನ ಪ್ರೇಮ ನಿವೇದನೆ ತಿರಸ್ಕರಿಸಿ ತನ್ನದೇ ರೀತಿಯಲ್ಲಿ ಬುದ್ಧಿವಾದ ಹೇಳಿದ್ದರೂ,ಬುದ್ದಿ ಕಲಿಯದ ಈತ ಮತ್ತೆ ಮತ್ತೆ ಕಿರುಕುಳ ನೀಡುವುದನ್ನು ಮುಂದುವರೆಸಿ,ಪಟ್ಟಣದ ಮುಖ್ಯ ರಸ್ತೆಯಲ್ಲೇ ಅನುಚಿತವಾಗಿ ವರ್ತಿಸಿ ಮಂಗಳಾರತಿ ಮಾಡಿಸಿಕೊಂಡಿದ್ದ ಎನ್ನಲಾಗಿದೆ.

ಇದಾಗಿ ವರ್ಷಗಳು ಕಳೆದರೂ ನಡತೆ ಸುಧಾರಿಸಿಕೊಳ್ಳದ ಈ ಆಸಾಮಿ ಹಳೇ ಚಾಳಿ ಮುಂದುವರೆಸಿ ಬಸ್ ನಿಲ್ದಾಣದ ಬಳಿ ತೆರಳಿ ಅಲ್ಲಿಯೇ ನಿಂತಿದ್ದ ಮಹಿಳಾ ಅಧಿಕಾರಿ ಜೊತೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ನಿಂದಿಸಿ , ಕೈಹಿಡಿದು ಎಳೆದು ಮಾನಹಾನಿಗೆ ಪ್ರಯತ್ನಿಸಿದ್ದಾನೆ.

ಮನನೊಂದ ಮಹಿಳಾ ಅಧಿಕಾರಿ ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪಿ ಎಸೈ ಈಸಿ ಸಂಪತ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಹಿಂದೆಯೂ ಇದೇ ಆರೋಪಿ ತಾಲೂಕಿನ ಖಾಸಗಿ ಕಾಲೇಜೊಂದರಲ್ಲಿ ತಾನು ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿರುವ ವೇಳೆ ತನ್ನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದು, ಧರ್ಮದೇಟು ತಿಂದಿದ್ದ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version