ಶಿರಸಿ: ನನ್ನ ತಂದೆಗೆ ತಲೆ ಮೇಲೆ ಹೊಡೆದು ಸಾಯ್ಸಿದ್ದಾರೆ. ಈ ಕಿಟ್‌ನಲ್ಲಿ ರಕ್ತ ಕಾಣುತ್ತಿದೆ. ಕೋವಿಡ್ ನಿಂದ ಸತ್ತಿದ್ದರೆ ತಲೆಯಲ್ಲಿ ರಕ್ತ ಹೇಗೆ ಬರಲು ಸಾಧ್ಯ? ಕೋವಿಡ್ ಸೋಂಕಿತ ವೃದ್ಧರೊಬ್ಬರ ಶವದ ಅಂತ್ಯಸoಸ್ಕಾರಕ್ಕೆ ಬಂದವರು ಮಾಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ಈ ರೀತಿಯ ಮಾತುಗಳು ಕೇಳಿಬರುತ್ತವೆ.
ಇದು ಶಿರಸಿ ಸಾರ್ವಜನಿಕ ಆಸ್ಪತ್ರೆಯಲ್ಲಾದ ಘಟನೆ ಎಂದು ಕೂಡ ಹೇಳಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಅಸಲಿಗೆ ಈ ವಿಡಿಯೋದಲ್ಲಿ ಹೇಳಿದಂತೆ ನಡೆದಿರುವುದು ನಿಜವೇ? ನಡೆದಿದ್ದಾದರೂ ಏನು? ಈ ವೈರಲ್ ವಿಡಿಯೋ ಸುದ್ದಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ವಿಡಿಯೋದಲ್ಲಿ ಇರುವುದು: ವೈರಲ್ ಆಗಿರುವ ವಿಡಿಯೋ ಪ್ರಕಾರ, ತಾಲೂಕಿನ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸೋಂಕಿತರ ವೃದ್ಧರೊಬ್ಬರನ್ನು ದಾಖಲು ಮಾಡಲಾಗಿತ್ತು. ಈ ವೇಳೆ ಅವರು ಸಾವನ್ನಪ್ಪಿದ್ದಾರೆ. ಕೋವಿಡ್‌ನಿಂದ ಮೃತಪಟ್ಟಿದ್ದಾರೆಂದು ಹೇಳಿ, ಕಿಟ್‌ನಲ್ಲಿ ಮೃತದೇಹವನ್ನು ತುಂಬಿ ಕುಟುಂಬಸ್ಥರಿಗೆ ನೀಡಲಾಗಿತ್ತು. ಈ ವೇಳೆ ಕುಟುಂಬಸ್ಥರು ಪಿಪಿಇ ಕಿಟ್ ಧರಿಸಿ ಮೃತದೇಹವನ್ನು ಸ್ಮಶಾನಕ್ಕೆ ತಂದಿದ್ದರು.
ಸ್ಮಶಾನಕ್ಕೆ ತಂದ ವೇಳೆ ತಲೆಯ ಭಾಗದಿಂದ ರಕ್ತ ಬರುತ್ತಿರುವುದನ್ನು ಮೃತನ ಮಗ ಹಾಗು ಕುಟುಂಬಸ್ಥರು ನೋಡಿದ್ದಾರೆ. ಈ ವೇಳೆ ವೈದ್ಯರ ಮೇಲೆ ಕೆಲ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ವೈದ್ಯರು ಹೇಳಿದ್ದೇನು? ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ್ ಭಟ್ , ಈ ಸಂಬoಧ ಸ್ಪಷ್ಟನೆ ನೀಡಿದ್ದು, ನಮ್ಮ ವೈದ್ಯರು ಜೀವದಹಂಗನ್ನು ಪಣಕ್ಕಿಟ್ಟು, ಹಗಲಿರುಳು ಸೋಂಕಿತರ ಸೇವೆಗೆ ಶ್ರಮಿಸುತ್ತಿದ್ದಾರೆ. ವೈದ್ಯರು ಯಾರು ಈ ಘಟನೆಗೆ ಕಾರಣವಲ್ಲ ಎಂದು ಸ್ಪಷ್ಟಪಡಿಸುತ್ತಾ, ರಕ್ತ ಬರಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ..
ಕೋವಿಡ್ ಸೋಂಕು ದೃಢಪಟ್ಟ ಶಿರಸಿ ತಾಲೂಕಿನ ಅಮಿನಳ್ಳಿ ಭಾಗದ ವೃದ್ಧನಿಗೆ ರೆಮ್‌ಡಿಸಿವಿರ್ ಕೊಡಲಾಗಿತ್ತು,. ಆರೋಗ್ಯ ಚೇತರಿಕೆಗೆ ಆಕ್ಸಿಜನ್ ಅನ್ನು ಕೂಡ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಕೋವಿಡ್ ಸೋಂಕಿತರಿಗೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ, ಆ ರೀತಿ ಆಗದಂತೆ ತಡೆಯಲು ಅವರಿಗೆ ಹಿಪೆರಿನ್ ಇಂಜೆಕ್ಷನ್ ನೀಡಲಾಗುತ್ತದೆ. ವೃದ್ಧ ಈ ಇಂಜೆಕ್ಷನ್ ಪಡೆದ ಬಳಿಕ ಅವರು ಶೌಚಾಲಯಕ್ಕೆ ಹೊರಟಿದ್ದಾರೆ.
ಈ ವೇಳೆ ಅವರು ಕುಸಿದುಬಿದ್ದಾರೆ. ಎಷ್ಟೆ ಪ್ರಯತ್ನಿಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೊದಲೇ ಕೋವಿಡ್ ಸೋಂಕಿತರಾಗಿದ್ದರಿoದ ಅವರು ಕೋವಿಡ್ ಸೋಂಕಿನಿoದ ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ರಕ್ತ ಹೆಪ್ಪುಗಟ್ಟುವುದನ್ನು ನಿಯಂತ್ರಿಸಲು ಹಿಪೆರಿನ್ ಇಂಜೆಕ್ಷನ್ ಕೊಟ್ಟಿದ್ದರಿಂದ, ಮೃತದೇಹವನ್ನು ಕೊಂಡೊಯ್ಯುವಾಗ ಜಂಪ್‌ಗಳಿoದಾಗಿ ತಲೆಯಿಂದ ರಕ್ತ ಬಂದಿರಬಹುದು. ಆದರೆ, ವೈದ್ಯರೇ ಸಾಯಿಸಿದ್ದಾರೆ ಎಂಬoತೆ ಬಿಂಬಿಸುವುದು ಸರಿಯಲ್ಲ. ಕೋವಿಡ್ ಸೋಂಕಿತರ ವೃದ್ದ ಬಿದ್ದಾಗ ತಲೆಯಲ್ಲಿ ಚಿಕ್ಕ ಗಾಯವಾಗಿತ್ತು. ಹೀಗಾಗಿ ರಕ್ತ ಸ್ರಾವವಾಗಿದೆ ಎಂದರು. ಇಂಥ ಸಂಕಷ್ಟದ ಸಮಯದಲ್ಲಿ ಮಾನವೀಯ ನೆಲೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್ಗಳ ಮೇಲೆ ಇಂತ ಆಪಾದನೆ ಮಾಡಬೇಡಿ ಎಂದು ವಿನಂತಿಸಿದರು.
ವಿಸ್ಮಯ ನ್ಯೂಸ್, ಶಿರಸಿ