ದಾಂಡೇಲಿ: ಮೊಬೈಲ್‌ನಲ್ಲಿ ಅತಿಯಾಗಿ ಮಾತನಾಡಬೇಡ ಎಂದು ಗಂಡ ಬುದ್ಧಿವಾದ ಹೇಳಿದ್ದೆ ತಪ್ಪಾಯ್ತು. ಹೌದು, ಇದೇ ಸಣ್ಣ ವಿಷಯಕ್ಕೆ ಮುನಿಸಿಕೊಂಡ ಪತ್ನಿ, ತನ್ನ ಗಂಡನ ಕೊಲೆಗೆ ಸುಪಾರಿ ನೀಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ಗಂಡನ ಕೊಲೆಗೆ ಸುಪಾರಿ ನೀಡಿದ ಪತ್ನಿ ಇದೀಗ ಪೋಲಿಸರ ಅಥಿತಿಯಾದ್ದಾಳೆ.
ತೇಜಸ್ವಿನಿ ಅಂಕುಷ ಸುತಾರ ಎನ್ನುವ ಮಹಿಳೆಯೇ ಗಂಡನ ಕೊಲೆಗೆ ಸುಪಾರಿ ನೀಡಿದ ಆರೋಪಿತೆ. ತೇಜಸ್ವಿನಿ ಹಾಗೂ ಅಂಕುಷ್ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ತೇಜಸ್ವಿನಿ ಪ್ರತಿದಿನ ಮೊಬೈಲ್‌ನಲ್ಲಿ ಅತಿಯಾಗಿ ಮಾತನಾಡುತ್ತಿರುವುದನ್ನು ಕಂಡ ಪತಿ ಆಕೆಯನ್ನು ಪ್ರಶ್ನಿಸಿ ಮೊಬೈಲ್‌ನಲ್ಲಿ ಮಾತನಾಡದಂತೆ ಬುದ್ದಿವಾದ ಹೇಳಿದ್ದ ಎನ್ನಲಾಗಿದೆ.
ಇದರಿಂದ ಸಿಟ್ಟಿಗೆದ್ದ ತೇಜಸ್ವಿನಿ ತನ್ನ ಗಂಡನಿಗೆ ಒಂದು ಗತಿ ಕಾಣಿಸಬೇಕೆಂದು ನಿರ್ಧರಿಸಿದ್ದಾಳೆ. ತನ್ನ ಸ್ನೇಹಿತೆ ಬೆಳಗಾವಿಯ ವನಿತಾ ಚೌಹಾಣ ಈಕೆಯನ್ನು ಸಂಪರ್ಕಿಸಿ ತನ್ನ ಗಂಡನ ಕೊಲೆಗೆ ಸಂಚು ರೂಪಿಸಿ 30 ಸಾವಿರ ಸುಪಾರಿ ನೀಡುವುದಾಗಿ ತಿಳಿಸಿ ಕೆಲಸ ಆದ ಮೇಲೆ ಹಣ ನೀಡುವುದಾಗಿ ತಿಳಿಸಿದ್ದಳು ಎನ್ನಲಾಗಿದೆ ಈ ಖತರ್ನಾಕ್ ಮಹಿಳೆ.
ಅರಂತೆ ಬೆಳಗಾವಿಯ ನಂಗಡದ ಗಣೇಶ ಶಾಂತಾರಾಮ ಪಾಟೀಲ್ ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿಕೊಂಡು ದಾಂಡೇಲಿಗೆ ಆಗಮಿಸಿ ಶುಕ್ರವಾರ ರಾತ್ರಿ 11 ಗಂಟೆಗೆ ಗಾಂವಠಾಣಾದಲ್ಲಿರುವ ಅಂಕುಷ್ ಸುತಾರ ಅವರ ಮನೆಗೆ ಬಂದು ತೇಜಸ್ವಿನಿಯ ಜೊತೆ ಕೂಡಿಕೊಂಡು ಅಂಕುಷನ ಕೊಲೆ ಮಾಡಲು ಪ್ರಯತ್ನಿಸುವಾಗ ಅಂಕುಷ್ ಜೋರಾಗಿ ಕೂಗಿಕೊಂಡಿದ್ದ. ಈ ವೇಳೆ ಅಕ್ಕ ಪಕ್ಕದ ಮನೆಯವರು ಕೂಡಲೇ ಆಗಮಿಸಿದ್ದಾರೆ. ಇದನ್ನು ಗಮನಿಸಿದ ಆರೋಪಿಗಳು ಪರಾರಿಯಾಗಿದ್ದರು.
ಈ ಕುರಿತು ದಾಂಡೇಲಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪರಾರಿಯಾಗಿರುವ ಆಪಾದಿತರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಪೋಲೀಸರು ತೇಜಸ್ವಿನಿಯನ್ನು ಮತ್ತು ಆರೋಪಿಯನ್ನು ಬಂಧಿಸಿದ್ದಾರೆ.. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿ.ಪಿ.ಐ ಪ್ರಭು ಆರ್ ಗಂಗನಹಳ್ಳಿಯವರ ನೇತೃತ್ವದಲ್ಲಿ ದಾಂಡೇಲಿ ಗ್ರಾಮೀಣ ಪೋಲೀಸ್ ಠಾಣಾ ಪಿ.ಸ್.ಐ ಹಾಗೂ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ದಾಂಡೇಲಿ