ಸಾಂಪ್ರದಾಯಿಕ ಮೀನುಗಾರರಿಗೆ ಕಾಡುತ್ತಿದೆ ಒಂದಲ್ಲ ಒಂದು ಸಮಸ್ಯೆ: ಸಂಕಷ್ಟದ ಸುಳಿಯಲ್ಲಿ ಕಡಲಮಕ್ಕಳು

ಕೋವಿಡ್ ಬಳಿಕ ಮಳೆಯಿಂದ ತೊಂದರೆ

ಕಾರವಾರ: ಅದ್ಯಾಕೋ ಏನೋ‌ ಕಳೆದೆರಡು ವರ್ಷಗಳಿಂದ ಉತ್ತರಕನ್ನಡದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಒಮ್ಮೆ ನೆರೆ ಪ್ರವಾಹದಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆಗೆ ಕಳೆದ ವರ್ಷ ಕೊರೊನಾ ಅಡ್ಡಿಯಾಗಿತ್ತು. ಈ ಬಾರಿ ಸಹ ಮಳೆಯ ಅಬ್ಬರದಿಂದಾಗಿ ಸಾಂಪ್ರದಾಯಿಕ ಮೀನುಗಾರರು ಕಡಲಿಗಿಳಿಯಲಾಗದೇ ಬೋಟುಗಳು ದಡದ ಮೇಲೆ ಉಳಿಯುವಂತಾಗಿದೆ.

ಹೌದು, ಪ್ರತಿವರ್ಷ ಮಳೆಗಾಲ ಆರಂಭದ ಜೂನ್ ತಿಂಗಳಿನಿಂದ 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಆದರೆ ಈ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇರುವ ಹಿನ್ನಲೆಯಲ್ಲಿ ಸಣ್ಣ ದೋಣಿಗಳಲ್ಲಿ 10 ನಾಟಿಕಲ್ ಮೈಲು ದೂರದೊಳಗೆ ಮೀನುಗಾರಿಕೆ ನಡೆಸಲಾಗುತ್ತದೆ. ಯಂತ್ರ ಬಳಸದೇ ಸಣ್ಣ ದೋಣಿಗಳಲ್ಲಿ ಬಲೆಯನ್ನು ಬೀಸಿ ಸಿಗುವ ಮೀನುಗಳನ್ನು ಮಾರಾಟ ಮಾಡಿ ಸಾಕಷ್ಟು ಮೀನುಗಾರರು ಜೀವನ ನಡೆಸುತ್ತಿದ್ದರು. ಆದರೆ ಈ ಬಾರಿ ಕಳೆದೊಂದು ತಿಂಗಳಿನಿಂದ ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಮತ್ತೆ ಮಳೆ ಮುಂದುವರೆದ ಹಿನ್ನಲೆಯಲ್ಲಿ ಕಡಲಿಗೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.

ಹೀಗಾಗಿ ಮಳೆಗಾಲದ ಸಂದರ್ಭದಲ್ಲಿ ಉತ್ತಮ ಮೀನುಗಾರಿಕೆ ನಡೆಸುತ್ತಿದ್ದ ಸಾಂಪ್ರದಾಯಿಕ ಮೀನುಗಾರರಿಗೆ ಇದು ಸಂಕಷ್ಟ ತಂದೊಡ್ಡಿದೆ. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನಲೆಯಲ್ಲಿ ಸಮುದ್ರದಲ್ಲಿ ದೋಣಿ ಇಳಿಸುವುದು ಅಪಾಯಕಾರಿಯಾಗಿದ್ದು ಮೀನುಗಾರಿಕೆಗೆ ತೆರಳಲಾಗದೇ ನೂರಾರು ಸಾಂಪ್ರದಾಯಿಕ ದೋಣಿಗಳು ದಡದಲ್ಲಿಯೇ ಉಳಿದುಕೊಂಡಿವೆ ಎನ್ನುತ್ತಾರೆ ಇಲ್ಲಿನ ಸಾಂಪ್ರದಾಯಿಕ ಮೀನುಗಾರರು.

ಸಾಂಪ್ರದಾಯಿಕ ಮೀನುಗಾರಇನ್ನು ಆಳಸಮುದ್ರ ಮೀನುಗಾರಿಕೆಗೆ ಅವಕಾಶ ಇರುವ ವೇಳೆ ಸಾಂಪ್ರದಾಯಿಕ ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುವುದಿಲ್ಲ. ಜೂನ್ 1 ರಿಂದ ಜುಲೈ 31ರ ವರೆಗೆ ಯಾಂತ್ರೀಕೃತ ಬೋಟುಗಳು ಕಡಲಿಗೆ ಇಳಿಯದಿರುವುದರಿಂದ ಈ ವೇಳೆಯಲ್ಲಿಯೇ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಸಿಕೊಂಡು ಉತ್ತಮ ಆದಾಯ ಗಳಿಸಿಕೊಳ್ಳುತ್ತಿದ್ದರು. ಈಗಾಗಲೇ ಆಳಸಮುದ್ರ ಮೀನುಗಾರಿಕೆ ನಿಷೇಧ ಅವಧಿ ಮುಗಿಯುವ ಹಂತಕ್ಕೆ ಬಂದಿದ್ದು ಈ ಬಾರಿಯೂ ಸಾಂಪ್ರದಾಯಿಕ ಮೀನುಗಾರಿಕೆ ವರುಣನ ಅವಕೃಪೆಗೆ ಒಳಗಾದಂತಾಗಿದೆ.

ಮೀನುಗಾರಿಕೆ ನಡೆಸಲು ಸಾಲ ಮಾಡಿ ಬೋಟು, ಬಲೆಗಳನ್ನ ಸಿದ್ಧಪಡಿಸಿಕೊಳ್ಳುವ ಮೀನುಗಾರರು ಮೀನುಗಾರಿಕೆ ನಡೆಯದೇ ಸಂಕಷ್ಟದಲ್ಲಿದ್ದು ಸರ್ಕಾರ ನೆರವು ನೀಡಬೇಕು ಅನ್ನೋದು ಮೀನುಗಾರರ ಅಭಿಪ್ರಾಯ. ‌ಇನ್ನು ಕರಾವಳಿಯಲ್ಲಿ ಜುಲೈ 17ರ ವರೆಗೂ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದ್ದು ಸಾಂಪ್ರದಾಯಿಕ ಮೀನುಗಾರಿಕೆಗೂ ಸಹ ನಿಷೇಧ ಹೇರಲಾಗಿದೆ ಅಂತಾ ಮೀನುಗಾರಿಕಾ ಇಲಾಖೆ ಮಾಹಿತಿ ನೀಡಿದೆ. ಒಟ್ಟಾರೇ ಕರಾವಳಿಯಲ್ಲಿ ಈ ಬಾರಿಯೂ ಸಹ ಸಾಂಪ್ರದಾಯಿಕ ಮೀನುಗಾರಿಕೆ ವರುಣನ ಅಬ್ಬರದಿಂದಾಗಿ ಸ್ಥಗಿತಗೊಳ್ಳುವಂತಾಗಿದೆ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಸಾಂಪ್ರದಾಯಿಕ ಮೀನುಗಾರರಿಗೆ ನೆರವು ನೀಡಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version