ಅಂಕೋಲಾ: ಗುತ್ತಿಗೆದಾರರ ವಿಳಂಬ ಹಾಗೂ ಇಲಾಖೆಯ ನಿರ್ಲಕ್ಷದಿಂದ,ಕುಂಟುತ್ತಾ ತೆವಳುತ್ತಾ ಸಾಗುತ್ತಿರುವ ಅಂಕೋಲಾ ಮುಖ್ಯರಸ್ತೆಯ ಕಾಮಗಾರಿ ಪ್ರದೇಶಕ್ಕೆ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ,ತಕ್ಷಣ ಗುಣಮಟ್ಟದ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ವಿವಿಧ ಸಂಘಟನೆಗಳು,ಕಾಂಗ್ರೆಸ್ ಪಕ್ಷ ಹಾಗೂ ಇತರೆ ಸಾರ್ವಜನಿಕ ಪ್ರಮುಖರು ರಸ್ತೆ ಅವ್ಯವಸ್ಥೆ ಖಂಡಿಸಿ ಸೋಮವಾರ ಪ್ರತಿಭಟನೆಗೆ ಸಿದ್ಧತೆ ನಡೆಸಿರುವ ನಡುವೆಯೇ, ಶಾಸಕರ ಭೇಟಿಯಿಂದ ಗುತ್ತಿಗೆದಾರ ಹಾಗೂ ಇಲಾಖೆ ಎಚ್ಚೆತ್ತುಕೊಂಡಂತಿದೆ.
ಅಂಕೋಲಾ ಪಟ್ಟಣ ವ್ಯಾಪ್ತಿಯ ಬಹುತೇಕ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.ಅದರಲ್ಲಿಯೂ ಮುಖ್ಯವಾಗಿ ಕಾರವಾರ ಕಡೆಯಿಂದ ಅಂಕೋಲಾ ಪಟ್ಟಣ ಕೂಡುವ ಕಣಕಣಕೇಶ್ವರ ದೇವಸ್ಥಾನದ ಎದುರಿನ ರಸ್ತೆ, ಹಾಗೂ ಕುಮಟಾ ಕಡೆಯಿಂದ ಬಸ್ ನಿಲ್ದಾಣಕ್ಕೆ ಬರುವ ದಿನಕರ ದೇಸಾಯಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಶಾಸಕಿ ರೂಪಾಲಿ ನಾಯ್ಕ ಈ ರಸ್ತೆಗೆ ಹೊಸ ರೂಪ ಕೊಡಲು ತನ್ನದೇ ಆದ ಕನಸಿನ ಯೋಜನೆ ರೂಪಿಸಿ ಸರ್ಕಾರದಿಂದ ಹಣ ಮಂಜೂರಿ ಮಾಡಿಸುವಲ್ಲಿ ವಿಶೇಷವಾಗಿ ಪ್ರಯತ್ನಿಸಿದ್ದರು. ತದನಂತರ ಕಳೆದ ಮೇ ತಿಂಗಳಲ್ಲಿ ಬಹುಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ,ಸುಂದರ ರಸ್ತೆ ನಿರ್ಮಾಣದ ಹೊಸ ಭರವಸೆ ಮೂಡಿಸಿದ್ದರು.
ಅದೇ ದಿನ ಗುತ್ತಿಗೆದಾರನ ಕಡೆಯವರು ಅದಾವುದೋ ಕಾರಣದಿಂದ ಶಾಸಕಿಯ ಬ್ಯಾನರ್ ಹರಿದ ಪ್ರಕರಣವೂ ನಡೆದಿತ್ತು. ತದನಂತರದ ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ನಾನಾ ರೀತಿಯ ಹಿನ್ನೆಡೆಯಾದವು.
ಕೋವಿಡ್ ಲಾಕ್ಡೌನ್,ಜಲ್ಲಿ ಹಾಗೂ ರೇತಿ ಸಮಸ್ಯೆ,ಇನ್ನಿತರ ಕಾರಣಗಳನ್ನಿಟ್ಟುಕೊಂಡು ಗುತ್ತಿಗೆದಾರ ತನ್ನ ಕಾಮಗಾರಿ ವಿಳಂಬಕ್ಕೆ ಸಬೂಬು ಹೇಳಿದರೆ,ಗುತ್ತಿಗೆದಾರ ಮಹಾಶಯನ ಮಾತನ್ನು ನಂಬಿ ಅವರು ಹೇಳಿದ್ದು ಸರಿ ಇದೆ ಎಂಬಂತೆ ತಲೆದೂಗಿದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ನಡೆಯೂ ಆರಂಭವಾಗಬೇಕಿದ್ದ ರಸ್ತೆ ಕಾಮಗಾರಿ ಹಿನ್ನೆಡೆಗೆ ಮತ್ತಷ್ಟು ಕಾರಣವಾಯಿತು ಎನ್ನಲಾಗಿದೆ.
ಈ ನಡುವೆ ಮಳೆಗಾಲದಲ್ಲಿ ಅಂತೂ ರಸ್ತೆ ಸಂಚಾರಿ ಗಳ ಪಾಡು ಹೇಳತೀರದಾಯಿತು. ಹೊಂಡದಲ್ಲಿ ರಸ್ತೆಯೋ ರಸ್ತೆಯಲ್ಲಿ ಹೊಂಡವೋ ಎನ್ನುವಂತಾಗಿ,ಪುರಸಭೆಯ ವಿರುದ್ಧ ಒಂದೆರಡು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು.ಪುರಸಭೆಯ ಓರ್ವ ಸದಸ್ಯ ರಸ್ತೆಯಲ್ಲಿ ಪಿಂಡ ಬಿಡುವುದಾಗಿ ಹೇಳಿ ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿದರೆ,ಸಾಮಾಜಿಕ ಜಾಲತಾಣಗಳು ಸೇರಿದಂತೆ ಇತರೆಡೆ ರಸ್ತೆಯ ದುರವಸ್ಥೆ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡಿತ್ತು.
ಈ ವೇಳೆ ಪುರಸಭೆಯವರು ಮುಖ್ಯರಸ್ತೆಯ ಕೆಲವೆಡೆ ತೇಪೆ ಹಚ್ಚುವ ಕಾರ್ಯ ನಡೆಸಿದ್ದರು.ಅಂತು ಇಂತೂ ಕಾಮಗಾರಿ ಗುತ್ತಿಗೆದಾರನೋ ಅಥವಾ ಅವನ ಪರವಾಗಿ ನೇಮಿಸಲ್ಪಟ್ಟ ಗುತ್ತಿಗೆದಾರನೋ ರಸ್ತೆ ಕಾಮಗಾರಿ ಆರಂಭಿಸಿ,ಆರಂಭ ಶೂರತನ ತೋರಿದ್ದು ಬಿಟ್ಟರೆ ಅಲ್ಲಲ್ಲಿ ಇರುವ ರಸ್ತೆಯಂಚನ್ನೂ ಅಗೆದು ಕಾಮಗಾರಿ ನಿಧಾನ ಗೊಳಿಸಿ, ವ್ಯವಸ್ಥೆ ಇನ್ನಷ್ಟು ಹದಗೆಡುವಂತೆ ಮಾಡಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಅಕ್ಟೋಬರ್ 25 ರ ಸೋಮವಾರ ಕಾಂಗ್ರೆಸ್ ಪಕ್ಷ ಸಹಿತ,ಕೆಲ ವಾಹನ ಸಂಘಟನೆಗಳು ಹಾಗೂ ಇತರರು ರಸ್ತೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಅದಕ್ಕೂ ಪೂರ್ವ ಶನಿವಾರ ಶಾಸಕಿ ರೂಪಾಲಿ ನಾಯ್ಕ ತಾವೇ ಖುದ್ದಾಗಿ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಸಂಬಂಧಿಸಿದ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ಯವರನ್ನು ಕರೆಯಿಸಿ,ಕಾಮಗಾರಿ ವಿಳಂಬ ನೀತಿಗೆ ಕಾರಣ ಕೇಳಿ,ಇನ್ನುಮುಂದಾದರೂ ಸರಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಸೂಚನೆ ನೀಡಿದರು.
ಶಾಸಕರು ಉತ್ತಮ ಯೋಜನೆ ಕನಸುಕಂಡಿದ್ದರಾದರೂ ಸಂಬಂಧಿತ ಇಲಾಖೆ ಹಾಗೂ ಗುತ್ತಿಗೆದಾರರ ವಿಳಂಬ ನೀತಿಯಿಂದ ಕಾಮಗಾರಿ ನಿರೀಕ್ಷಿತ ವೇಗ ಪಡೆಯದೆ ಕುಂಟುತ್ತಾ ತೆವಳುತ್ತಾ ಸಾಗುತ್ತಿದೆ. ಇದರಿಂದ ರಸ್ತೆಯಂಚಿನ ನಿವಾಸಿಗಳು,ದಾರಿಹೋಕರು,ಸೈಕಲ್ , ದ್ವಿಚಕ್ರವಾಹನ ಸವಾರರು,ರಿಕ್ಷಾ ಕಾರು ಮತ್ತಿತರ ವಾಹನಗಳಲ್ಲಿನ ಪ್ರಯಾಣಕ್ಕೆ ತೀವ್ರ ತೊಡಕಾಗುತ್ತಿದೆ. ಅದನ್ನು ಮನಗಂಡು ಶಾಸಕಿ ರೂಪಾಲಿ ನಾಯ್ಕ ಸಾರ್ವಜನಿಕ ಸಂಚಾರ ಸುಗಮ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗುಣಮಟ್ಟದ ಕಾಮಗಾರಿ ಶೀಘ್ರ ಆರಂಭಗೊಂಡು ಮುಂದಿನ ಏಪ್ರಿಲ್ ಒಳಗೆ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರವಾರ ರಸ್ತೆಯ ನೀಲಂಪುರ ಕ್ರಾಸ್ ಕಡೆಯಿಂದ ಶಿರಕುಳಿ – ಕಣಕಣೇಶ್ವರ ದೇವಸ್ಥಾನ ಮಾರ್ಗವಾಗಿ ಮುಖ್ಯ ಮುಖ್ಯ ರಸ್ತೆ ಅಭಿವೃದ್ಧಿ ಹಾಗೂ ತದನಂತರ ಬಸ್ಟಾಂಡ್ ಮಾರ್ಗವಾಗಿ ಹೊನ್ನಾರಾಕಾ ದೇವಸ್ಥಾನದ ಎದುರಿನ ರಾ.ಹೆ ಸೇರುವ ದಿನಕರ ದೇಸಾಯಿ ರಸ್ತೆಯನ್ನೂ ದ್ವಿಪಥ ಹಾಗೂ ವಿದ್ಯುದೀಕರಣಗಳನ್ನೊಳಗೊಂಡ ಸುಂದರ ಸುಸಜ್ಜಿತ ರಸ್ತೆ ನಿರ್ಮಾಣದ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದಭದಲ್ಲಿ ತಹಶೀಲ್ದಾರ ಉದಯ ಕುಂಬಾರ, ಪುರಸಭೆಯಮುಖ್ಯಾಧಿಕಾರಿಗಳು,ಇಂಜಿನಿಯರ್,ಅಧ್ಯಕ್ಷರು ,ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಇತರೆ ಜನಪ್ರತಿನಿಧಿಗಳು,ಸಂಬಂಧಿತ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ಬಿಜೆಪಿ ಪಕ್ಷದ ಪ್ರಮುಖರು, ಇತರೆ ಸಾರ್ವಜನಿಕರು ಉಪಸ್ಥಿತರಿದ್ದರು.ರಸ್ತೆ ಕಾಮಗಾರಿ ವೇಳೆ ಬಸ್ ಮತ್ತಿತರ ಭಾರಿ ವಾಹನಗಳ ಓಡಾಟವನ್ನು ನಿಯಂತ್ರಿಸುವಂತೆ,ಪೊಲೀಸ, ಸಾರಿಗೆ ಇಲಾಖೆಗಳು ಕ್ರಮಕೈಗೊಳ್ಳುವಂತೆ ತಿಳಿಸಲಾಯಿತು.
ಕಾಮಗಾರಿಯ ವೇಳೆ ರಸ್ತೆ ಅಕ್ಕಪಕ್ಕದ ನಿವಾಸಿಗಳು ಸೇರಿದಂತೆ ಸರ್ವರ ಸಹಕಾರ ಅಗತ್ಯವಿದ್ದು, ಸಂಬಂಧಿತ ಇಲಾಖೆ ಹಾಗೂ ಗುತ್ತಿಗೆದಾರ ಈಗಲಾದರೂ ತಮ್ಮ ಜವಾಬ್ದಾರಿ ನಿಭಾಯಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ