ರಾಷ್ಟ್ರ ರಾಜಧಾನಿಯಲ್ಲಿ ಕಂಪು ಬೀರಿದ ಹೊನ್ನಳ್ಳಿ ತುಳಸಿ: ಬರಿಗಾಲಲ್ಲಿ ಹಳ್ಳಿಯಿಂದ ದಿಲ್ಲಿ ತಲುಪಿದ ವೃಕ್ಷ ಮಾತೆ ಅಂಕೋಲೆಗೊಲಿದ 2ನೇ ಪದ್ಮಶ್ರೀ ಗೌರವ

ಅಂಕೋಲಾ: ನೂರಾರು ಎಕರೆ ಅರಣ್ಯ ಭೂಮಿಯಲ್ಲಿ ಗಿಡಗಳನ್ನು ಬೆಳೆಸಿ ಉಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿರುವ ತಾಲೂಕಿನ ಹೊನ್ನಳ್ಳಿಯ ಹಾಲಕ್ಕಿ ಮಹಿಳೆ ತುಳಸಿ ಗೌಡ ಅವರು ನವೆಂಬರ 8 ರ ಸೋಮವಾರ ದೆಹಲಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರದ 4 ನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತುಳಸಿ ಗೌಡ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿ , ಅವರ ಪರಿಸರ ಸಂರಕ್ಷಣಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾವಿರಾರು ಜಾತಿಗಳ ಗಿಡಗಳನ್ನು ನೆಟ್ಟು ಬೆಳೆಸಿ, ಕಳೆದ 6 ದಶಕಗಳಿಂದ ಅರಣ್ಯೀಕರಣದ ಮೂಲಕ ತನ್ನ ಹಸಿರು ಪ್ರೇಮ ತೋರಿಸಿ, ಲಕ್ಷಾಂತರ ಬೀಜಗಳು ಮೊಳಕೆ ಒಡೆದು ಸಸಿಯಾಗಿ, ಆ ಸಸಿಗಳು ಮರಗಳಾಗುವಂತೆ ಸಲ್ಲಿಸಿದ ಅನನ್ಯ ಸೇವೆ ಗುರುತಿಸಿ ತುಳಸಿ ಗೌಡ ಅವರಿಗೆ 2020 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿತ್ತು.

ಅಂಕೋಲಾ ತಾಲೂಕಿಗೆ ಮೊದಲ ಪದ್ಮಶ್ರೀ ಪ್ರಶಸ್ತಿ ತಂದ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮಾ ಗೌಡ ಅವರ ಆಶೀರ್ವಾದ ಪಡೆದು ಪದ್ಮಶ್ರೀ ಪ್ರಶಸ್ತಿ ಪಡೆಯಲು ತುಳಸಿ ಗೌಡ ಅವರು ಹೊನ್ನಳ್ಳಿಯಿಂದ ದೆಹಲಿ ಪ್ರಯಾಣ ಬೆಳೆಸಿದ್ದರು.

ಕಾಯಕವೇ ಕೈಲಾಸ ಎಂದು ನಂಬಿ ಹಸಿರು ಪರಿಸರ ನಿರ್ಮಾಣಕ್ಕೆ ಅವಿರತ ಸೇವೆ ನೀಡುತ್ತ ಬಂದಿರುವ ತುಳಸಿ ಗೌಡ,ದೇಶವೇ ಹೆಮ್ಮೆ ಪಡುವಂತಹ ಪದ್ಮಶ್ರೀ ಪುರಸ್ಕಾರ ಒಲಿದುಬಂದರೂ ಸಹ ಅದಕ್ಕೆ ಅಹಂ ಪಡದೇ,ಈ ಹಿಂದಿನಂತೆಯೇ ತನ್ನ ಸರಳ ನಡೆ-ನುಡಿ, ಹಾಲಕ್ಕಿಗಳ ಸಾಂಪ್ರದಾಯಿಕ ಉಡುಗೆ ತೊಟ್ಟು, ಹಳ್ಳಿಯಿಂದ ದಿಲ್ಲಿಗೆ ಬರಿಗಾಲಲ್ಲೇ ತೆರಳಿದ್ದು, ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿಯೂ ಅವರು ತೋರಿದ ವಿನೀತ ಭಾವ ಗಮನಿಸಬಹುದಾಗಿದೆ.

ತುಳಸಿ ಗೌಡ ಅವರ ಪ್ರಶಸ್ತಿಯಿಂದಾಗಿ ಜಿಲ್ಲೆಯ ಬಹುಸಂಖ್ಯಾತ ಹಾಲಕ್ಕಿಗಳಿಗಷ್ಟೇ ಅಲ್ಲದೇ, ಅಂಕೋಲಾ ತಾಲೂಕಿಗೆ, ಉತ್ತರ ಕನ್ನಡ ಜಿಲ್ಲೆಗೆ, ನಮ್ಮ ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆಯ ಗರಿ ಮೂಡಿದಂತಾಗಿದೆ.ಪ್ರಧಾನಮಂತ್ರಿ ಸೇರಿದಂತೆ ದೇಶದ ನಾನಾ ಗಣ್ಯರು, ತುಳಿಸಿ ಗೌಡ ಕುಟುಂಬವರ್ಗದವರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version