Uttara Kannada
Trending

ಸಂಕಲ್ಪ’ ಕಾರ್ಯಾಗಾರ:ಹೊನ್ನಾವರದ ವ್ಯಾಸ ಸೆಂಟರ್ ಫಾರ್ ಎಕ್ಸಲೆನ್ಸ್ ,ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ

ಹೊನ್ನಾವರ: ಪರಿಶ್ರಮ ಇದ್ದರೆ ಯಾವುದೂ ಅಸಾಧ್ಯವೆಂಬುದಿಲ್ಲ.ಆದರೆ ನಾವೇನಾಗಬೇಕು ಎನ್ನುವ ಗುರಿ ಸ್ಪಷ್ಟ ಇರುವುದು ಮುಖ್ಯ’ ಎಂದು ಶ್ರೀ ಕರ್ನಾಟಕ ಪಿಎಸ್ಐ ಟಾಪರ್ ಆದ ಬಾಬು ರೆಡ್ಡಿಯವರು ‘ಸಂಕಲ್ಪ’ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಹೇಳಿದರು.’ಸಂಕಲ್ಪ’ ಕಾರ್ಯಾಗಾರವನ್ನು ಹೊನ್ನಾವರದ ವ್ಯಾಸ ಸೆಂಟರ್ ಫಾರ್ ಎಕ್ಸಲೆನ್ಸ್ ,ಲಯನ್ಸ್ ಕ್ಲಬ್, ತಾಲ್ಲೂಕು ಪಂಚಾಯತ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬಾಬು ರೆಡ್ಡಿಯವರು ಕರಾವಳಿ ಪ್ರದೇಶ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹೊಂದಿದ್ದರೂ ಸರ್ಕಾರಿ ನೌಕರಿ ಅದಕ್ಕೆ ಪೂರಕವಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವಲ್ಲಿ ಹಿಂದೆ ಬಿದ್ದಿರುವುದನ್ನು ಉಲ್ಲೇಖಿಸಿದರು. ಮುಖ್ಯ ಅತಿಥಿಗಳಾದ ಲಯನ್ಸ್ ಅಧ್ಯಕ್ಷರಾದ ಶ್ರೀ ವಿನೋದ ನಾಯ್ಕ ಅವರು ಬಾಬು ರೆಡ್ಡಿಯವರ ಸಾಧನೆಯನ್ನು ನಮ್ಮ ವಿದ್ಯಾರ್ಥಿಗಳು ಆದರ್ಶವಾಗಿ ಸ್ವೀಕರಿಸಬೇಕು ಎಂದರು.
ಯುವಜನ ಸೇವಾ ಹಾಗೂ ಕ್ರೀಡಾ ಅಧಿಕಾರಿಯಾದ ಸುದೇಶ ನಾಯ್ಕ ಅವರು ಎಲ್ಲ ಕ್ಷೇತ್ರದಲ್ಲಿ ನಮ್ಮ ವಿದ್ಯಾರ್ಥಿಗಳು ಬೆಳೆಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.

ವ್ಯಾಸ ಕೇಂದ್ರದ ರಾಜೇಶ್ ಶೇಟ್ ಅವರು ಉತ್ತರ ಕನ್ನಡ ಭಾಗದ ವಿದ್ಯಾರ್ಥಿಗಳಲ್ಲಿ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿ,ಸೂಕ್ತ ತರಬೇತಿ ನೀಡುವಲ್ಲಿ ವ್ಯಾಸ ಸೆಂಟರ್ ಫಾರ್ ಎಕ್ಸಲೆನ್ಸ್ ಕೆಲಸ ಮಾಡುತ್ತಿರುವ ಬಗೆಯನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಸುಮಂಗಲಾ ನಾಯ್ಕ ಅವರು ಕಾಲೇಜು ಒಂದು ಸಣ್ಣ ಕೊಠಡಿಯಿಂದ ಪ್ರಾರಂಭಗೊಂಡು ಇಂದು ಸುಸಜ್ಜಿತ ಕಟ್ಟಡವನ್ನು ಹೊಂದಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತಾಗಿದ್ದರ ಬಗ್ಗೆ ಹರ್ಷ ವ್ಯಕ್ತಪಡಿಸುತ್ತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವ ವ್ಯಾಸ ಕೇಂದ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.

ಸಭಾ ಕಾರ್ಯಕ್ರಮದ ನಂತರ 2 ಗಂಟೆಗಳ ಕಾಲ ಬಾಬು ರೆಡ್ಡಿಯವರು ಪೊಲೀಸ್ ನೇಮಕಾತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ನಂತರ ಅನೇಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರಿಸಿದರು. 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಗಾರದ ಪ್ರಯೋಜನ ಪಡೆದರು.

ಪ್ಲೇಸ್ಮೆಂಟ್ ಸೆಲ್ ನ ಮುಖ್ಯಸ್ಥರಾದ ಕಾವ್ಯಶ್ರೀ ಅವರು ಸ್ವಾಗತಿಸಿದರು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿಯಾದ ಉದಯ ನಾಯ್ಕ ಅವರು ವಂದನಾರ್ಪಣೆ ಮಾಡಿದರು.ಕುಮಾರಿ ದೀಪಾ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Back to top button