ತಂಪು ಪಾನೀಯ ಕುಡಿದ ಬಾಲಕಿ ಅಸ್ವಸ್ಥ ಗೊಂಡಿದ್ದೇಕೆ ?. ನಡೆದ ಅಚಾತುರ್ಯಕ್ಕೆ ಹೊಣೆ ಯಾರು ? ಕೂಲ್ ಡ್ರಿಂಕ್ಸ್ ನಲ್ಲಿ ಅದ್ದಿದ ಕಡ್ಡಿಗೆ ತಗುಲಿತು ಬೆಂಕಿ

ಅಂಕೋಲಾ : ಪಕ್ಕದ ಮನೆಗೆ ಆಡಲು ಹೋಗಿದ್ದ ಪುಟಾಣಿ ಬಾಲಕಿ ಯೋರ್ವಳು,ಆಟದ ನಂತರ ದಣಿವಾರಿಸಿಕೊಳ್ಳಲು ತಂಪು ಪಾನೀಯ ಎಂದು ತಿಳಿದು,ಬೇರೆ ಯಾವುದೋ ದ್ರಾವಣವನ್ನು ಸೇವಿಸಿ , ಕೆಲ ಸಮಯದ ನಂತರ ವಾಂತಿ ಮಾಡಿ ಅಸ್ವಸ್ಥಗೊಂಡು,ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.   

ಪಟ್ಟಣ ವ್ಯಾಪ್ತಿಯ ಪಳ್ಳಿಕೇರಿ -ಕನಸಿ ಗದ್ದೆ ವ್ಯಾಪ್ತಿಯಲ್ಲಿ ಈ ಅಚಾತುರ್ಯ ಘಟನೆ ನಡೆದಿದ್ದು,ಅದೃಷ್ಟವಶಾತ್  ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ  ಬಾಟಲಿಯಲ್ಲಿದ್ದ ಅದಾವುದೋ ದ್ರಾವಣದ ಅರಿವಿಲ್ಲದೇ ತಂಪು ಪಾನೀಯ ಎಂದು ಗುಟುಕರಿಸಿದಾಗ, ಅತ್ತ ಬಾಯಿಗೆ ರುಚಿಯೂ  ಎನಿಸದೇ, ಸೀಮೆಎಣ್ಣೆಯಂತ ವಾಸನೆಯ ಹೋಲಿಕೆ ಬಂದಿರುವದಕ್ಕೆ ಅವಕ್ಕಾಗುವಂತಾಗಿದೆ.

ವಿಷಯ ತಿಳಿದ ದೊಡ್ಡವರೂ ರುಚಿ ಮತ್ತು ವಾಸನೆ ಪರೀಕ್ಷಿಸಲು ಮುಂದಾದಾಗ ಅದು ಖಂಡಿತವಾಗಿ ತಂಪು ಪಾನೀಯವಲ್ಲ ಎಂಬ ತೀರ್ಮಾನಕ್ಕೆ ಬಂದು, ಸೀಮೆ ಎಣ್ಣೆ ಅಥವಾ ಟರ್ಪಂಟೈನ್ ಆಗಿರಬಹುದೆಂದು ಊಹಿಸಿ, ಆ ದ್ರಾವಣದಲ್ಲಿ ಕಡ್ಡಿಯೊಂದನ್ನು ಅದ್ದಿ ತೆಗೆದು ಬೆಂಕಿ ಕಡ್ಡಿ  ಗೀರಿದಾಗ ಬೆಂಕಿ ಬುಗ್ಗೆಂದಿದೆ.       ಈ ವಿಷಯ ಸ್ಥಳೀಯರಲ್ಲಿ ಹಲವು ಚರ್ಚೆ ಹುಟ್ಟು ಹಾಕಿದಂತಿದೆ. ಆ ಬಾಟಲ್ ಯಾವ ಕಂಪನಿಯದು ? ವಿತರಕರಾರು ? . ಅಥವಾ ಮಾರಾಟಗಾರನ ದೃಷ್ಟಿ ದೋಷದಿಂದ ಈ ಬಾಟಲ್ ಪ್ರಿಜ್ ಸೇರುವಂತಾಯಿತೇ ಇತ್ಯಾದಿ ಸಂಶಯದ ಪ್ರಶ್ನೆಗಳು ಸುಳಿದಂತೆ ಇದೆ.

ಬಾಲಕಿ ಪಾನೀಯ ಸೇವಿಸಿದ ಕೆಲ ಸಮಯದ ನಂತರ ಸ್ವಲ್ಪ ವಾಂತಿ ಮಾಡಿಕೊಂಡು,ಗಾಬರಿಗೊಂಡ ಕುಟುಂಬವರ್ಗದವರು ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಾಲಕಿ ಆರೋಗ್ಯದ ಮೇಲೆ ನಿಗಾ ಇಡುವ ಉದ್ದೇಶದಿಂದ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಆಂಬುಲೆನ್ಸ್ ಮೂಲಕ ಕಾರವಾರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ವಿಷಯ ತಿಳಿಯುತ್ತಲೇ ಆಸ್ಪತ್ರೆಗೆ ಬಂದ ಪೋಲಿಸರು, ಬಾಲಕಿಯ  ಪಾಲಕರು,ಕುಟುಂಬ ಸದಸ್ಯರು, ಹಾಗೂ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳೀಯ  ಅಂಗಡಿಕಾರನಿಗೆ ತಂಪು ಪಾನೀಯ ಬಾಟಲ್ ಪೂರೈಸಿದ್ದಾರೆ ಎನ್ನಲಾದ 1-2 ವಿತರಕರನ್ನು ಕರೆಯಿಸಿ ವಿಚಾರಣೆ ನಡೆಸಿದ್ದರು ಎನ್ನಲಾಗಿದ್ದು,ವಿಚಾರಣೆಯ ವೇಳೆ ಆ ವಿತರಕರು ದೋಷ ಪೂರಿತ ಎಂದು ಹೇಳಲಾದ ಆ ಬಾಟಲಿ ಬ್ರಾಂಡ್ ನೇಮ್ ಬೇರೆಯದೇ ಇದ್ದು, ತಾವು ಅದನ್ನು ಮಾರುತ್ತಿಲ್ಲ. ಆ ಬ್ರ್ಯಾಂಡಿನ ವಿತರಕರು ಬೇರೆಯೇ ಇದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು ಕೆಲವರ ಅನಿಸಿಕೆ ಪ್ರಕಾರ ಬ್ರ್ಯಾಂಡ್ ಯಾವುದೇ ಇದ್ದರು,ತಂಪುಪಾನೀಯದ ಬಾಟಲಿನಲ್ಲಿ ಬೇರೆ ದ್ರಾವಣ ಹೇಗೆ ಸೇರ್ಪಡೆಯಾಯಿತು ? . ಗ್ರಾಹಕರು ಖರೀದಿಸುವ ಮುನ್ನವೇ ಬಾಟಲಿಯ ಮುಚ್ಚಳ ತೆರೆದಿತ್ತೇ ?. ಸೀಲ್ ಒಡೆದ ಒಂದೇ ಬಾಟಲಿ ಇದ್ದರೆ ಅದು ಕಂಪನಿ ಅಥವಾ ವಿತರಕರ ದೋಷ ಹೇಗಾಗಲು ಸಾಧ್ಯ?. ಅಷ್ಟಕ್ಕೂ ವ್ಯವಹಾರಿಕ ದೃಷ್ಟಿಯಿಂದ ನೋಡಿದರೂ ತಂಪು ಪಾನೀಯದ ಬೆಲೆಗಿಂತ , ಸೀಮೆ ಎಣ್ಣೆ,ಟರ್ಪಂಟೈನ್ ಇತರೆ ದ್ರಾವಣಗಳ ಬೆಲೆಯೇ ಹೆಚ್ಚಿರುವಾಗ ತಂಪುಪಾನೀಯದ ಬದಲು ಇಂತಹ ದ್ರಾವಣಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡಲು ಸಾಧ್ಯವೇ ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟಂತಿದೆ.

ಇಲ್ಲವೇ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಾಗದೇ ,ಉತ್ತಮ ಬ್ರಾಂಡಿನ ತಂಪು ಪಾನೀಯ ಕಂಪನಿಯ ಹೆಸರಿಗೆ ಮಸಿ ಬಳಿಯಲು ಅದಾರೋ ನಡೆಸಿದ ಕುತಂತ್ರವೇ  ಎನ್ನುವ ಮಾತು ಕೇಳಿ ಬಂದಿದೆ.ವಿಷಯ ಏನೇ ಇರಲಿ ಸಂಬಂಧಿತ ಆರೋಗ್ಯ, ಆಹಾರ, ಪೊಲೀಸ್ ಇನ್ನಿತರೆ ಇಲಾಖೆಗಳು ಈ ಕುರಿತು ತನಿಖೆ ಕೈಗೊಂಡು,ಮುಂದೆ ಹೀಗಾಗದೆ ಕಟ್ಟೆಚ್ಚರವಹಿಸುವಂತೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಕೆಲವರು ಆಗ್ರಹಿಸಿದ್ದಾರೆ.

ತಂಪು ಪಾನೀಯವೇ ಇರಲಿ,ಇತರೆ ಆಹಾರ ಔಷಧಿಗಳೇ ಇರಲಿ,ಅವುಗಳನ್ನು ಸೇವಿಸುವ ಮುನ್ನ,ಅಥವಾ ಇತರರಿಗೆ ಕೊಡುವ ಮುನ್ನ , ಅವುಗಳ  ತಯಾರಿಕೆಯಿಂದ ಹಿಡಿದು ಬಳಕೆ ಅವಧಿ, ಪ್ಯಾಕಿಂಗ್ ಸೀಲ್,ಗುಣಮಟ್ಟ ಮತ್ತಿತರ ಸಾಂದರ್ಭಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು,ಮುಂಜಾಗ್ರತೆ ವಹಿಸಿ, ಆರೋಗ್ಯ ಕಳಕಳಿಯಿಂದ  ಒತ್ತು ನೀಡಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.ಅದರಲ್ಲಿಯೂ ವಿಶೇಷವಾಗಿ ಮಕ್ಕಳು,ವೃದ್ಧರು, ಗರ್ಭಿಣಿಯರು, ರೋಗಿಗಳಿಗೆ ಮಾರಕವಾಗದಂತೆ  ಆರೋಗ್ಯ ಕಾಳಜಿ ವಹಿಸಬೇಕಿದೆ.         

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Exit mobile version