ಅಂಕೋಲಾ: ಭಾವಿಕೇರಿಯ ಮಹಿಳೆಯೋರ್ವಳಲ್ಲಿ ಕೋವಿಡ್-19 ಧೃಡಪಟ್ಟ ಹಿನ್ನಲೆಯಲ್ಲಿ ತಾಲೂಕಿನ ಜನತೆ ಆತಂಕಕ್ಕೆ ಒಳಗಾಗಿದ್ದರು. ಸೋಂಕಿತ ಮಹಿಳೆಯನ್ನು ಕುಮಟಾಕ್ಕೆ ಕರೆದುಕೊಂಡು ಹೋಗಿ ಬಂದಿದ್ದ ಕಾರ ಚಾಲಕನ ಗಂಟಲು ದ್ರವ ಪರೀಕ್ಷೆ ವರದಿ ಕುರಿತು ಭಯಮಿಶ್ರಿತ ಕುತೂಹಲವಿತ್ತಾದರೂ, ಯಾವುದೇ ಸೋಂಕಿನ ಲಕ್ಷಣಗಳಿಲ್ಲದೆ ವರದಿ ನೆಗೆಟಿವ್ ಬಂದಿದೆ ಎಂದು ಹೇಳಲಾಗಿದ್ದು, ಅಧಿಕೃತವಾಗಿ ಮಾಹಿತಿ ತಿಳಿದು ಬರಬೇಕಿದೆ.
ತಾಲೂಕಿನಲ್ಲಿ ಆರಂಭದಿಂದ ಜೂನ್ 18ರ ವರೆಗೆ ಒಟ್ಟೂ 435 ವ್ಯಕ್ತಿಗಳ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವುಗಳಲ್ಲಿ ಭಾವಿಕೇರಿಯ ಮಹಿಳೆಗೆ ಮಾತ್ರ ಸೋಂಕು ಧೃಡಪಟ್ಟಿದ್ದು, ಇನ್ನು ಕೆಲವರ ಪರೀಕ್ಷಾ ವರದಿ ಬರಬೇಕಿದೆ.
ಶುಕ್ರವಾರ ಹೊಸದಾಗಿ ಮತ್ತೆ 11 ಜನರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದ್ದು ಇವರೆಲ್ಲರೂ ಸೋಂಕಿತ ಮಹಿಳೆಯ ಪ್ರಾಥಮಿಕ ಮತ್ತು ದ್ವೀತೀಯ ಸಂಪರ್ಕದಲ್ಲಿದ್ದವರು ಎಂದು ತಿಳಿದು ಬಂದಿದ್ದು ಮುಂದಿನ 2-3 ದಿನಗಳಲ್ಲಿ ಅವರೆಲ್ಲರ ಪರೀಕ್ಷಾ ವರದಿ ಬರುವ ಸಾಧ್ಯತೆ ಇದೆ. ಅಂಕೋಲಾದ ಮಟ್ಟಿಗೆ ಶುಕ್ರವಾರ ಯಾವುದೇ ಹೊಸ ಪ್ರಕರಣಗಳಿಲ್ಲದೇ ಜನತೆ ಕೊಂಚ ನೆಮ್ಮದಿಯಿಂದ ಇರುವಂತೆ ಆಗಿದೆ.
ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.