ವಿಧಾನಪರಿಷತ್ ಚುನಾವಣೆಗೆ ತಾಲೂಕಾಡಳಿತ ಸನ್ನದ್ದ| ಅಂಕೋಲಾದ 21 ಗ್ರಾಪಂ ಹಾಗೂ 1 ಪುರಸಭೆ ಸೇರಿ ಒಟ್ಟು 22 ಕೇಂದ್ರಗಳಲ್ಲಿ ಮತಗಟ್ಟೆ

ಅಂಕೋಲಾ : ಸ್ಥಳೀಯ ಸಂಸ್ಥೆಗಳ ಮತದಾರ ಕ್ಷೇತ್ರದಿಂದ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಡಿಸೆಂಬರ್ 10 ರಂದು ಶುಕ್ರವಾರ ನಡೆಯಲಿದ್ದು ತಾಲೂಕು ಆಡಳಿತದ ವತಿಯಿಂದಲೂ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.

ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿನ ಒಟ್ಟೂ 21 ಗ್ರಾಮ ಪಂಚಾಯಿತಿಗಳ ಕಾರ್ಯಾಲಯಗಳು ಹಾಗೂ 1 ಪುರಸಭೆಯ ಸಭಾಭವನ ಸೇರಿದಂತೆ ಒಟ್ಟು 22 ಮತಗಟ್ಟೆಗಳನ್ನು ತೆರೆಯಲಾಗಿದ್ದು ಈ ಪೈಕಿ 21 ಸೂಕ್ಷ್ಮ ಹಾಗೂ ಪಟ್ಟಣದ ಪುರಸಭೆ ಕಾರ್ಯಾಲಯದ ಮತ ಕೆಂದ್ರವನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.

ಚುನಾಯಿತ ಪ್ರತಿನಿಧಿಗಳು ಆಯಾ ವ್ಯಾಪ್ತಿಯ ತಮ್ಮ ಅಧಿಕಾರ ಇರುವ ಪಂಚಾಯಿತಿ, ಮತ್ತು ಪುರಸಭೆ ಕೇಂದ್ರಗಳಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತಿದೆ..

ತಾಲೂಕಿನಲ್ಲಿ 21 ಗ್ರಾಪಂ ಗಳಿಂದ ಒಟ್ಟು 228 ಗ್ರಾಮ ಪಂಚಾಯಿತಿ ಸದಸ್ಯರು, ಮತ್ತು ಪುರಸಭೆಯಿಂದ ಒಟ್ಟಾ 23 ಸದಸ್ಯರು ಸೇರಿದಂತೆ ತಾಲೂಕಿನಲ್ಲಿ ಒಟ್ಟಾರೆಯಾಗಿ 251 ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ.

ಒಟ್ಟೂ 251 ಚುನಾಯಿತ ಸದಸ್ಯರಲ್ಲಿ 118 ಪುರುಷ ಮತ್ತು 133 ಮಹಿಳಾ ಮತದಾರರರು ಇದ್ದಾರೆ.
ಅಂಕೋಲಾ ಪುರಸಭೆಯಲ್ಲಿ 23 ಮತದಾರರಿರುವ ಮೂಲಕ ತಾಲೂಕಿನ ಅತೀ ದೊಡ್ಡ ಮತಗಟ್ಟೆಯಾಗಿ ಗುರುತಿಸಿಕೊಂಡಿದ್ದರೆ,, ವಾಸರೆ ಕುದ್ರಿಗೆ ಪಂಚಾಯಿತಿಯಲ್ಲಿ 7 ಜನ ಮತದಾರರಿರುವ ಮೂಲಕ ತಾಲೂಕಿನ ಅತಿ ಕಡಿಮೆ ಮತದಾರರನ್ನು ಹೊಂದಿದ ಮತಗಟ್ಟೆಯೆನಿಸಿದೆ.

ಗುರುವಾರ ಬೆಳಿಗ್ಗೆಯಿಂದಲೇ ತಹಶೀಲ್ದಾರ ಕಚೇರಿ ಆವರಣದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮತ ಕೇಂದ್ರಗಳಿಗೆ ಸಿಬ್ಬಂದಿಗಳನ್ನು ನೇಮಿಸುವ, ಮತ್ತಿತರ ಕಾರ್ಯ ನಡೆಸಲಾಗಿದ್ದು ಪ್ರತಿ ಮತಗಟ್ಟೆಗೆ ತಲಾ ಓರ್ವರಂತೆ ಅಧ್ಯಕ್ಷಾಧಿಕಾರಿ, ಮತಗಟ್ಟೆ ಅಧಿಕಾರಿ, ಆರೋಗ್ಯ ಕಾರ್ಯಕರ್ತೆ,ಆಶಾ ಕಾರ್ಯಕರ್ತೆ, ಡಿ ಗ್ರೂಪ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿದಂತೆ 6 ಜನರನ್ನು ನೇಮಕ ಮಾಡಲಾಗಿದೆ.

ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಪಿ.ವೈ. ಸಾವಂತ್ ಅವರು ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಜಿಲ್ಲಾಧಿಕಾರಿಗಳ ಮಾರ್ಗದರ್ಶನಲ್ಲಿ
ತಾಲೂಕು ದಂಡಾಧಿಕಾರಿ ಉದಯ ಕುಂಬಾರ ಅವರು ಚುನಾವಣಾ ಪೂರ್ವ ತಯಾರಿ ಕುರಿತು ವಿಷೇಷ ಕರ್ತವ್ಯ ನಿರ್ವಹಿಸುತ್ತಿದ್ದು, ಇತರೆ ಇಲಾಖೆಗಳ ಅಧಿಕಾರಿಗಳು , ಸಿಬ್ಬಂದಿಗಳು, ಶಿಕ್ಷಕರು ಸೇರಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಗೊಂಡ ಸಿಬ್ಬಂದಿಗಳೆಲ್ಲರೂ,ಚುನಾವಣೆ ಪ್ರಕ್ರಿಯೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version