545 ಪಿ ಎಸ್ ಐ ನೇಮಕ ಪ್ರಕ್ರಿಯೆ ಸ್ಥಗಿತ ?. ಖಾಕಿ ಪಡೆ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಸಾಧ್ಯತೆ ?
ಅಂಕೋಲಾ: ಆಡಳಿತಾತ್ಮಕ ಕಾರಣದಿಂದ ಸಿವಿಲ್ ಪಿ.ಎಸ್.ಐ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಇಲಾಖೆಯಿಂದ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ 545 ಪೋಲಿಸ್ ಸಬ್ ಇನ್ಸಪೆಕ್ಚರ್ ನೇಮಕಾತಿ ಪ್ರಕ್ರಿಯೆಗೆ ತಡೆ ಬಿದ್ದಂತಾಗಿದ್ದು ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
ನೇಮಕಾತಿ ಪ್ರಕ್ರಿಯೆ ಮುಂದಿನ ಆದೇಶ ಬರುವ ವರೆಗೆ ಸ್ಥಗಿತಗೊಳಿಸುವಂತೆ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ ಪಾಲ್ ಅವರು ಹಿರಿಯ ಅಧಿಕಾರಿಗಳಿಗೆ ಸೋಮವಾರ ತುರ್ತು ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.
ಸಿವಿಲ್ ಪಿ.ಎಸ್. ಐ ಹುದ್ದೆಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಗೊಂಡು ಘಟಕವಾರು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿತ್ತು
ಅಲ್ಲದೇ ಆಯ್ಕೆಯಾದ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರೀಶಿಲನೆಗೆ ಸೂಚಿಸಲಾಗಿತ್ತು.
ಆದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ಮಾದ್ಯಮಗಳು ಈ ಕುರಿತಂತೆ ಬೆಳಕು ಚೆಲ್ಲಿದ್ದವು.
ಈ ಹಿನ್ನೆಲೆಯಲ್ಲಿಯೇ ಈ ಹಿಂದೆ ಪ್ರಕಟವಾದ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಕುರಿತು ಸುದ್ದಿಗಳು ಕೇಳಿ ಬರುತ್ತಿವೆ.
ಈಗಾಗಲೇ ಪ್ರಕಟವಾದ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲವರು ಸಹ ಆಯ್ಕೆಯಾಗಿದ್ದು ನೇಮಕಾತಿಗೆ ಕಾಯುತ್ತಿದ್ದರು ಎಂದು ತಿಳಿದು ಬಂದಿದೆ. ಇದೀಗ ಹಠಾತ್ ಪ್ರಕ್ರಿಯೆ ಸ್ಥಗಿತಗೊಂಡ ಕಾರಣ ರಾಜ್ಯದ ನಾನಾ ಕಡೆಯ ಉದ್ಯೋಗಾಕಾಂಕ್ಷಿಗಳಲ್ಲಿ ಹಲವರ ಪಾಲಿಗೆ ಆತಂಕ, ನಿರಾಸೆ ಹಾಗೂ ಗೊಂದಲ ಮೂಡುವಂತಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಖಾಕಿ ಪಡೆ ನೇಮಕಾತಿಯ ಹಿಂದೆ ಭಾರೀ ಪ್ರಮಾಣದ ಅಕ್ರಮ ನಡೆದಿರುವ ಸಾದ್ಯತೆಗಳು ಕೇಳಿಬರುತ್ತಿದ್ದು, ನೇಮಕಾತಿ ಕುರಿತಂತೆ ಇಲಾಖೆ ತೆಗೆದುಕೊಳ್ಳುವ ಮುಂದಿನ ಕ್ರಮ ಹಾಗೂ ತೀರ್ಮಾನಗಳಿಂದ ಸ್ಪಷ್ಟ ಚಿತ್ರಣ ದೊರೆಯಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ