ಅಂಕೋಲಾ: ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಎನ್ನುವುದು, ಸರಕಾರದ ಅಧೀನದಲ್ಲಿ ಬರುವ ಲೋಕೋಪಯೋಗಿ ಇಲಾಖೆಗೆ ಅನ್ವಯಿಸುವುದಿಲ್ಲವೇ? ಅಥವಾ ಸಂಬಂಧಿತ ಇಲಾಖೆಯ ಕೆಲ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ ಧೋರಣೆಯಿಂದ, ಆಡಳಿತದಲ್ಲಿ ಕನ್ನಡ ಎಂಬ ನೀತಿ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.
ಅಂಕೋಲಾ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಬಹುತೇಕ ಒಂದಲ್ಲ ಒಂದು ಎಡವಟ್ಟುಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತವೆ. ರಾ.ಹೆ 66ರ ಅಂಕೋಲಾ – ಕುಮಟಾ ಮಧ್ಯೆ (ಮಾದನಗೇರಿ) ಬಳಲೆ ವ್ಯಾಪ್ತಿಯಲ್ಲಿ, ಗುರುವಾರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ, ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಫಲಕ ಅನಾವರಣ ಗೊಳಿಸಲಾಗಿತ್ತು. ಈಗ ಈ ಮಾಹಿತಿ ಫಲಕದ ಬರವಣಿಗೆ ವಿಷಯ ಭಾರೀ ಚರ್ಚೆಗೆ ಕಾರಣವಾದಂತಿದೆ.
ಬಳಲೆ ಕ್ರಾಸ್ ಬಳಿ 1.75 ಕೋಟಿ ಅನುದಾನದಲ್ಲಿ ಗೋಕರ್ಣ ರಸ್ತೆಯಿಂದ ವಡ್ಡಿ ಮೂಲಕ ಶಿರಸಿ ದೇವನಹಳ್ಳಿ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಶಾಸಕರು, ಸ್ಥಳೀಯ ಜನಪ್ರತಿನಿಗಳು, ಗುದ್ದಲಿ ಪೂಜೆ ನೆರವೇರಿಸಿದ್ದರು. ತಾಲೂಕಿನ ಬೇರೆ ಬೇರೆ ಕಡೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಒಂದೇ ದಿನ, ಬ್ಯುಸಿ ಶೆಡ್ಯೂಲ್ಡ್ ನಡುವೆಯೇ ಶಾಸಕರು ಬಂದು ಕಾಮಗಾರಿಗೆ ಚಾಲನೆ ನೀಡುವಂತಾಗಿತ್ತು. ಹಾಗಾಗಿ ಅವರು ಬಳಲೆ ವ್ಯಾಪ್ತಿಯ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಪಾಲ್ಗೊಳ್ಳದೆ,ಚುಟುಕಾಗಿ ಮಾತನಾಡಿ,ಅಗಸೂರು ಮತ್ತಿತರ ಕಾರ್ಯಕ್ರಮಗಳಿಗೆ ತೆರಳಿದ್ದರು.
ಓರ್ವ ಮಹಿಳಾ ಶಾಸಕಿಯಾಗಿ,ಕಾರವಾರ – ಅಂಕೋಲಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ,ಶಾಸಕಿ ರೂಪಾಲಿ ನಾಯ್ಕ ನೂರಾರು ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಿ ತಂದು,ಜನಪರ ಯೋಜನೆಗಳಿಗೆ ಒತ್ತುನೀಡಿ ಹೆಸರಾಗುತ್ತಿದ್ದಾರೆ. ಆದರೆ ಇವರ ಕನಸಿನ ಅಭಿವೃದ್ಧಿ ವೇಗಕ್ಕೆ ತಕ್ಕಂತೆ,ಹೆಜ್ಜೆ ಇಡಲಾಗದ ಲಜ್ಜೆಗೆಟ್ಟ ಕೆಲ ಅಧಿಕಾರಿಗಳು,ತಮ್ಮ ಆಮೆ ಗತಿಯ ನಿಧಾನ ಕಾರ್ಯಶೈಲಿ ಮೂಲಕ,ಜನಸಾಮಾನ್ಯರು ಹೈರಾಣಾಗುವಂತೆ ಮಾಡಿ,ಶಾಸಕರು ತಂದ ಒಳ್ಳೆಯ ಕಾಮಗಾರಿಗಳಿಗೆ ತೀವ್ರ ಹಿನ್ನಡೆಯಾಗಲು ಕಾರಣರಾಗಿದ್ದಾರೆ ಎನ್ನಲಾಗಿದೆ.
ಸಂಬಂಧಿಸಿದ ಗುತ್ತಿಗೆದಾರರು ಇಲ್ಲವೇ ಇಲಾಖೆಯ ಎಡವಟ್ಟಿನಿಂದ ಈ ಹಿಂದೆ ಪಟ್ಟಣದ ಪಟ್ಟಣದ ಕಣಕಣೇಶ್ವರ ದೇವಸ್ಥಾನದ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನಡೆದ ನಂತರ, ಶಾಸಕರ ಬ್ಯಾನರ್ ಹರಿದ ಪ್ರಕರಣ, ಆಮೆಗತಿ ಕಾಮಗಾರಿ, ಪ್ರತಿಭಟನೆ ಇತ್ಯಾದಿ ಹತ್ತಾರು ಕಾರಣಗಳನ್ನು ಉದಾಹರಿಸಬಹುದಾಗಿದೆ.
ಆದರೆ ಅವೆಲ್ಲವನ್ನು ಸಹಿಸಿಕೊಂಡು, ಅಭಿವೃದ್ಧಿಯೊಂದೇ ತನ್ನ ಧ್ಯೇಯ ಎಂದು ತಿಳಿದ ಶಾಸಕರು, ಸತತ ಪ್ರಯತ್ನ ಮಾಡಿ ಹೆಚ್ಚಿನ ಅನುದಾನ ತಂದು, ಸಂಪೂರ್ಣ ಮುಖ್ಯರಸ್ತೆಗೆ ಹೊಸ ರೂಪ ಕೊಡಲು ಮುಂದಾಗಿ, ಮಾದರಿ ಜನಪ್ರತಿನಿಧಿ ಎನಿಸಿ ಸಾರ್ವಜನಿಕ ವಲಯದ ಪ್ರಶಂಸೆಗೂ ಪಾತ್ರರಾಗುತ್ತಿದ್ದಾರೆ. ತಮ್ಮ ಜವಾಬ್ದಾರಿ ಕರ್ತವ್ಯದ ಮೂಲಕ, ಶಾಸಕರ ಜನಪರ ಕೆಲಸಗಳನ್ನು ಬೆಂಬಲಿಸಬೇಕಿದ್ದ ಕೆಲ ಅಧಿಕಾರಿಗಳ ಎಡವಟ್ಟು, ಶಾಸಕರಿಗೂ ಕೆಲವೊಮ್ಮೆ ಇರಿಸು-ಮುರಿಸು ತರದಿರಲಾರದು ಎಂಬ ಮಾತು ಸಾರ್ವಜನಿಕ ವಲಯದಿಂದ ಅಲ್ಲಲ್ಲಿ ಕೇಳಿ ಬಂದಿದೆ.
ಬಳಲೆ ಬಳಿಯ ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿದ ನಂತರ ಕೆಲ ಸ್ಥಳೀಯರು ಕಾಮಗಾರಿ ಫಲಕ ನೋಡಿ, ಕಾಮಗಾರಿ ಮಾಹಿತಿ ತಿಳಿಯಲು ಮುಂದಾದಾಗ, ಮಾಹಿತಿ ಫಲಕದಲ್ಲಿ ರುವ ಕಾಮಗಾರಿ ಏನು ಎಂದು ಸರಿಯಾಗಿ ಅರ್ಥೈಸಿಕೊಳ್ಳಲು ಕಷ್ಟ ಪಡುವಂತಿತ್ತು.
ಮಾಹಿತಿ ಫಲಕದಲ್ಲಿ ಕರ್ನಾಟಕ ಸರ್ಕಾರದ ಹೆಸರನ್ನು ಪಟ್ಟನೆ ಓದಲಾಗದಂತೆ ಸಣ್ಣದಾಗಿ ಬರೆಯಲಾಗಿದ್ದರೆ, ಲೋಕೋಪಯೋಗಿ ಇಲಾಖೆ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ದೊಡ್ಡ – ಸಣ್ಣ ಎನ್ನುವುದಕ್ಕಿಂತ ಇವೆರಡನ್ನು ಕನ್ನಡದಲ್ಲೇ ಬರೆದಿರುವುದಕ್ಕೆ ಸಂತಸಪಡಬೇಕಿದೆ ಎಂಬ ಮಾತು ಕೇಳಿ ಬಂದಿದೆ.
ಮುಂದಿನ ಸಾಲುಗಳಲ್ಲಿ ಕಾಮಗಾರಿಯ ವಿವರ ಮಾತ್ರ ಸಂಪೂರ್ಣ ಇಂಗ್ಲಿಷ್ ಮಯವಾಗಿದ್ದು, ಗ್ರಾಮೀಣ ಭಾಗದ ಹೆಚ್ಚೇನು ವಿದ್ಯಾಭ್ಯಾಸ ಮಾಡದ ಕೆಲ ಜನರಿಗೆ ಇದು ಅರ್ಥವಾಗದ ಭಾಷೆ ಆದರೆ, ಇನ್ನು ಕೆಲವರು ರಸ್ತೆ ಪಕ್ಕದಲ್ಲಿ ಹೋಗುತ್ತಿರವ ವಿದ್ಯಾರ್ಥಿಗಳನ್ನು ಕರೆದು ತಮ್ಮಾ ಇದೇನು ಬರಿದಿರೋ ಮಾತ್ರ ಓದಿ ಹೇಳ್ರೋ ಎಂದು ಕುತೂಹಲದಿಂದ ಕೇಳಿ ಅರಿಯುವ ಪ್ರಯತ್ನ ಮಾಡಿದಂತಿತ್ತು.
ಇದು
ಯಾವ ರಸ್ತೆ ಕಾಮಗಾರಿ, ಇಲ್ಲಿ ಏನು ಕೆಲಸ ನಡೆಯುತ್ತಿದೆ, ಎಂಬಿತ್ಯಾದಿ ಕಾಮಗಾರಿಯ ಕುರಿತ ವಿವರ ಇಂಗ್ಲಿಷ್ ಮಯವಾಗಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ. ತದನಂತರ ಮಾಹಿತಿ ಫಲಕದ ಮುಂದಿನ ಸಾಲುಗಳಲ್ಲಿ ಗುತ್ತಿಗೆದಾರರ ಹೆಸರು ,ಗುದ್ದಲಿ ಪೂಜೆ ಇತರೆ ವಿವರಗಳನ್ನು ಕನ್ನಡದಲ್ಲಿ ಬರೆಯಲಾಗಿದ್ದು,ಹಿಂದಿನ ಸಾಲುಗಳಲ್ಲಿ ಬೇಕೆಂತಲೇ ಇಂಗ್ಲಿಷ್ ಬರೆದು ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆಯೇ ? ಅಥವಾ ನಿಜಕ್ಕೂ ಅಧಿಕಾರಿಗಳಿಗೆ ಇಂಗ್ಲಿಷ್ ನ ಮೇಲೆ ಅಷ್ಟೊಂದು ವ್ಯಾಮೋಹವೇ ಎಂಬ ಪ್ರಶ್ನೆಗೆ ಸಂಬಂಧಿಸಿದವರೇ ಉತ್ತರಿಸಬೇಕಿದೆ.
ಕರ್ನಾಟಕ ಸರ್ಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿ ವಿವರಗಳು ಕನ್ನಡದಲ್ಲೇ ಇರಬೇಕಲ್ಲವೇ ಪ್ರಮುಖ ವಿವರಗಳನ್ನೇ ಇಂಗ್ಲೀಷ್ ನಲ್ಲಿ ಬರೆದಿರುವುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ?
ಲೋಕಪಯೋಗಿ ಇಲಾಖೆಯ ಇಂಜಿನಿಯರ್ ಗಳ ಇಂಗ್ಲಿಷ್ ವ್ಯಾಮೋಹ ಸರ್ಕಾರಿ ಕಾಮಗಾರಿ ಮಾಹಿತಿ ಫಲಕಗಳ ಮೇಲೆ ತೋರುವುದು ಬೇಡ, ಕಾಮಗಾರಿಗಳ ಮಾಹಿತಿ ಕನ್ನಡದಲ್ಲೇ ಇರಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು ಈ ವಿಷಯ ಕನ್ನಡಾಭಿಮಾನಿಗಳ ಗಮನಕ್ಕೂ ಬಂದಿದ್ದು ,ಲೋಕೋಪಯೋಗಿ ಇಲಾಖೆ ತನ್ನ ತಪ್ಪನ್ನು ಒಂದೆರೆಡು ದಿನಗಳಲ್ಲಿ ಸರಿಪಡಿಸಿ ಕೊಳ್ಳದಿದ್ದಲ್ಲಿ, ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಪ್ರತಿಭಟಿಸುವ ಸಾಧ್ಯತೆ ಕೇಳಿಬಂದಿದೆ.
ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಗಿಸಿ,ಬಿಲ್ ಮಾಡಿಕೊಡುವ ತರಾತುರಿಯಲ್ಲಿ ಇದ್ದಂತೆ ಕಾಣುವ,ಸಂಬಂಧಿತ ಅಧಿಕಾರಿಗಳು,ಕಣ್ಮುಚ್ಚಿ ಕೆಲಸ ಮಾಡದೇ,ಎಲ್ಲವನ್ನೂ ಸರಿಯಾಗಿ ಪರಾಮರ್ಶಿಸಲಿ ಎನ್ನುವುದು ಪ್ರಜಾ ವಂತರ ಅನಿಸಿಕೆಯಾಗಿದೆ.
ಅದೇ ರೀತಿ ಮಂಜಗುಣಿ ಮುಖ್ಯ ರಸ್ತೆ ಸುಧಾರೀಕರಣದ ಹೆಸರಲ್ಲಿ ಬಂಡಿಕಟ್ಟೆ ಮತ್ತಿತರೆಡೆ ರಸ್ತೆ ಮಧ್ಯೆ ಇರುವ ವಿದ್ಯುತ್ತ ಕಂಬಗಳನ್ನು ಪಕ್ಕಕ್ಕೆ ಸರಿಸದೇ, ಅವಸರದಲ್ಲಿ ಕಾಮಗಾರಿ ನಡೆಸುತ್ತಿರುವುದಕ್ಕೆ ಸ್ಥಳೀಯ ಜನಪ್ರತಿನಿದಿಗಳು , ಹಾಗೂ ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಸಂಬಂಧಿಸಿದವರು ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ