
ಅಂಕೋಲಾ : ತಾಲೂಕಿನ ಕೊರೊನಾ ಹಾಟ್-ಸ್ಪೊಟ್ ಎಂದೇ ಬಿಂಬಿತವಾಗಿರುವ ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯಲ್ಲಿ 70ವರ್ಷದ ವೃದ್ಧನಲ್ಲಿ ಗುರುವಾರ ಮತ್ತೊಂದು ಹೊಸ ಕೋವೀಡ್-19 ಪ್ರಕರಣಗಳು ಧೃಡಪಡುವದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಪ್ರಥಮ ಸೋಂಕಿತ ಭಾವಿಕೇರಿ ಮಹಿಳೆ ಗುಣಮುಖಳಾಗಿ ಮನೆಗೆ ಮರಳಿದ್ದು, ಉಳಿದ 14 ಪ್ರಕರಣಗಳು ಸಕ್ರೀಯವಾಗಿದೆ.
ಈವರೆಗೆ ತಾಲೂಕಿನಲ್ಲಿ ಒಟ್ಟೂ 705 ಜನರ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯ ಆರಂಭಿಕ ಸೋಂಕಿತನ ಪ್ರಕರಣದ ತರುವಾಯ, ಆತನ ಕುಟುಂಬಸ್ಥರು ಹಾಗೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರು ಸೇರಿದಂತೆ ಹಲವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು, ಅದರ ಹೊರತಾಗಿ ಸಮುದಾಯದಲ್ಲಿ ಸೋಂಕು ಹರಡಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ರ್ಯಾಂಡಮ್ ಟೆಸ್ಟ ಸಹ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯಲ್ಲಿ ಈವರೆಗೆ 189 ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದು ಅವುಗಳಲ್ಲಿ 99 ವರದಿಗಳು ಬಂದಿವೆ ಎನ್ನಲಾಗಿದೆ. ಈ ವೇಳೆಗಾಗಲೇ ಸೋಂಕಿತರ ಸಂಖ್ಯೆ 14ಕ್ಕೆ ತಲುಪಿದ್ದು, ಬುಧವಾರ ಒಂದೇ ದಿನ ಸಂಗ್ರಹಿಸಿ ಕಳುಹಿಸಲಾದ ಸುಮಾರು 55 ಗಂಟಲುದ್ರವದ ಪರೀಕ್ಷಾ ವರದಿ ನಾಳೆ ಶುಕ್ರವಾರ ಬರುತ್ತದೆ ಎಂದು ಹೇಳಲಾಗುತ್ತಿದ್ದು, ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಮತ್ತೆ ಕೆಲವರ ಗಂಟಲುದ್ರವದ ಮರುಪರೀಕ್ಷೆಗೆ (2ನೇ ಬಾರಿಯ ಪರೀಕ್ಷೆ) ಆರೋಗ್ಯ ಇಲಾಖೆ ಮುಂದಾಗಲಿದ್ದು ಜನತೆಯಲ್ಲಿ ಆತಂಕ ಹೆಚ್ಚುತ್ತಿದೆ.
-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.