ಮಾಹಿತಿ
Trending

ಪ್ರಥಮಭಾಷೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಅಂಕೋಲಾ: ತಾಲೂಕಿನಲ್ಲಿ ಒಟ್ಟೂ 29 ಪ್ರೌಢ ಶಾಲೆಗಳಿದ್ದು, ಗುರುವಾರ ನಡೆದ ಎಸ್.ಎಸ್.ಎಲ್.ಸಿ ಪ್ರಥಮ ಭಾಷೆ ಪರೀಕ್ಷೆಯನ್ನು ಬರೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ 5ನೇ ಪರೀಕ್ಷೆ ಎದುರಿಸಿದರು. ಪರೀಕ್ಷೆಗೆ ನೊಂದಾಯಿಸಿಕೊಂಡ ಒಟ್ಟು 1254 ವಿದ್ಯಾರ್ಥಿಗಳ ಪೈಕಿ 1178 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 4 ಪುನರಾವರ್ತಿತ ವಿದ್ಯಾರ್ಥಿಗಳೂ ಪರೀಕ್ಷೆ ಬರೆದಿದ್ದಾರೆ.
ಕೋವೀಡ್-19 ಆತಂಕದ ನಡುವೆಯೇ ಅಂಕೋಲಾ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯುತ್ತಿದ್ದು ಸರ್ಕಾರ ಮತ್ತು ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶನದಲ್ಲಿ ಹಲವು ಮುಂಜಾಗೃತೆ ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕಿನ ಎಲ್ಲಾ 4 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮತ್ತು ಪರೀಕ್ಷಾ ಕೇಂದ್ರಕ್ಕೆ ನಿಯೋಜಿತ ಇತರೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.
ತಾಲೂಕಿನ ಎಲ್ಲಾ ಪರೀಕ್ಷಾಕೇಂದ್ರಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ತಹಶೀಲ್ದಾರ ಉದಯ ಕುಂಬಾರ ಪರೀಕ್ಷಾ ಕೇಂದ್ರಗಳಿಗೆ ತೆರಳಿ ವ್ಯವಸ್ಥೆ ಪರಿಶೀಲಿಸುತ್ತಿದ್ದು, ಸಿಪಿಐ ಕೃಷ್ಣಾನಂದ ಜಿ.ನಾಯಕ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಈ.ಸಿ.ಸಂಪತ್ ಮತ್ತು ಪೊಲೀಸ್ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವಂತೆ ತಮ್ಮ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ, ವಿವಿಧ ಇಲಾಖೆಗಳ ಸಹಕಾರ ಪಡೆದು ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡುತ್ತಿದ್ದಾರೆ ಮತ್ತು ವಿದ್ಯಾರ್ಥಿ ಪಾಲಕರ ಆತಂಕ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಗ್ರಾಮೀಣ ಭಾಗ ಸೇರಿದಂತೆ ಹಲವೆಡೆಯಿಂದ ವಿದ್ಯಾರ್ಥಿಗಳನ್ನು ಕರೆ ತರಲು 22 ಸಾರಿಗೆ ಬಸ್ಸ್ ಮತ್ತು 3 ಶಾಲಾ ವಾಹನವನ್ನು ಬಳಸಿಕೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು, ಶಾಲಾ ಆವರಣ ಪ್ರವೇಶಿಸುವ ಮೊದಲು ತಮ್ಮ ಕೈ-ಕಾಲುಗಳನ್ನು ತೊಳೆದುಕೊಂಡು ಬರಲು ನೀರಿನ ವ್ಯವಸ್ಥೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಹತ್ವ ನೀಡಿರುವುದು ಕಂಡುಬಂತು. ಪ್ರವೇಶ ದ್ವಾರದ ಬಳಿ ಎಲ್ಲಾ ವಿದ್ಯಾರ್ಥಿಗಳ ಕೈಗೆ ಸೆನಿಟೈಜರ್ ಹಾಕಿ ಸೋಂಕು ನಿವಾರಣ ಕ್ರಮ ತೆಗೆದುಕೊಳ್ಳಲಾಯಿತು., ಆರೋಗ್ಯ ಸಿಬ್ಬಂದಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನರ ಬಳಸಿ ದೇಹದ ತಾಪಮಾನ ಪರೀಕ್ಷಿಸಿದರು. ವಿದ್ಯಾರ್ಥಿಗಳ ಮಾಸ್ಕ ಧರಿಸಿರುವುದನ್ನು ಖಚಿತಪಡಿಸಿಕೊಂಡು ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ಹೆಚ್ಚಿಸಲಾಯಿತು. ಭಾರತ ಸ್ಕೌಟ್ಸ್ ಸಿಬ್ಬಂದಿಗಳು ವಿಶೇಷ ಸಹಕಾರ ನೀಡುತ್ತಿದ್ದಾರೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button