ಮಂಗನ ಕಾಟ: ವೃದ್ಧೆಗೆ ಕಚ್ಚಿ ಗಾಯ: 8 ರಿಂದ 10 ಜನರ ಮೇಲೆ ಹಲ್ಲೆ: ಗನ್ ಮೂಲಕ ಅರವಳಿಕೆ ಇಂಜೆಕ್ಷನ್ ಹಾರಿಸುವ ಯತ್ನ

ಅಂಕೋಲಾ: ತಾಲೂಕಿನ ಬಬ್ರುವಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಒಂಟಿ ಮಂಗದ ಉಪಟಳದಿಂದ, ನಾಗರಿಕರು ಹೈರಾಣಾಗುವಂತಾಗಿದ್ದು,ಆತಂಕದಿಂದ ಕಾಲಕಳೆಯುತ್ತಿದ್ದಾರೆ. ಕಳೆದ 2-3 ದಿನಗಳಿಂದ ಈ ಮಂಗ ದ ಉಪಟಳ ಹೆಚ್ಚಾಗಿದೆ.

ದಾರಿಹೋಕರು,ಮನೆಯ ಅಕ್ಕ ಪಕ್ಕದಲ್ಲಿರುವವರನ್ನು ಬಿಡದೇ ಹಲವರಿಗೆ ಪರಚಿ, ಕಚ್ಚಿ ಗಾಯಗೊಳಿಸಿರುವ ಈ ಮಂಗದ ಉಪಟಳ ತಾಳಲಾರದೇ ಸ್ಥಳೀಯರು ಅರಣ್ಯ ಇಲಾಖೆ ಮೊರೆಹೋಗಿದ್ದಾರೆ.

ಉರಗ ಸಂರಕ್ಷಣೆ, ವನ್ಯ ಜೀವಿಗಳ ರಕ್ಷಣೆ ಕಾರ್ಯದಲ್ಲಿ ಸದಾ ಮುಂದಿರುವ ತದಡಿಯ ಅಶೋಕ ನಾಯ್ಕ, ಅವರ್ಸಾದ ಮಹೇಶ ನಾಯ್ಕ ಸೇರಿದಂತೆ ಸ್ಸಾಮುವೆಲ್ ಅಂಕೋಲಾ ಮತ್ತಿತರರನ್ನು ಒಳಗೊಂಡ ಜಿಲ್ಲಾ ಡೇರಿಂಗ್ ಟೀಮ್ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸಿ.ಆರ್ ನಾಯ್ಕ,ಬಸವನಗೌಡ ಬಗಲಿ ಮತ್ತಿತರರೊಂದಿಗೆ ಬೆಳಿಗ್ಗೆ 6 ಘಂಟೆಯಿಂದ .ರಾತ್ರಿ 8 ಗಂಟೆವರೆಗೆ ಮಂಗವನ್ನು ಸೆರೆಹಿಡಿಯಲು ನಿರಂತರ ಕಾರ್ಯಾಚರಣೆ ನಡೆಸಿದರು,

ನಾನಾ ತೊಡಕುಗಳಿಂದ ಯಶಸ್ಸು ದೊರೆತಿಲ್ಲ. ಅಂಕೋಲಾದ ನೂತನ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ , ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಗನ್ ಮೂಲಕ ಮಂಗಕ್ಕೆ ಅರವಳಿಕೆ ಇಂಜೆಕ್ಷನ್ ನೀಡಲು ಪ್ರಯತ್ನಿಸಿದರು.

ಮನೆಯಿಂದ – ಮನೆಗೆ, ಮರದಿಂದ – ಮರಕ್ಕೆ ಹಾರುತ್ತಿರುವ ಮಂಗಕ್ಕೆ ಗುರಿಯಿಡಲು ಕಷ್ಟ ಸಾಧ್ಯ ಎನಿಸಿ, ರಾತ್ರಿ ಆದ್ದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿ,ಬೆಳಗ್ಗೆ ಮತ್ತೆ ಮುಂದುವರೆಸುವ ಸಾಧ್ಯತೆ ಕೇಳಿಬಂದಿದೆ.

ಈಗಾಗಲೇ ಗ್ರಾಮದ 8 – 10 ಜನರು ಹಾಗೂ ಡೇರಿಂಗ್ ಟೇಮ್ ಸದಸ್ಯರೊಬ್ಬರಿಗೂ ಮಂಗ ಪರಚಿ ಗಾಯಗೊಳಿಸಿದೆ ಎನ್ನಲಾಗಿದೆ ಮಂಗಳವಾರ ಸಂಜೆ ವೇಳೆ , ವೃದ್ಧೆಯೊಬ್ಬಳು ತನ್ನ ಮನೆಯ ಮಾವಿನ ಮರದ ಬಳಿ ತೆರಳುತ್ತಿದ್ದಂತೆ , ಅದೆಲ್ಲಿಂದಲೋ ದುತ್ತನೆ ಹಾರಿ ಬಂದ ಮಂಗ , ವೃದ್ಧೆಯನ್ನು ಕಚ್ಚಿ, ಪರಚಿ ಗಾಯಗೊಳಿಸಿದೆ. ವೃದ್ಧೆ ಕೂಗಿಕೊಂಡು ಮನೆ ಒಳಗೆ ಓಡಿ ಹೋಗುವಷ್ಟರಲ್ಲೇ, ಕಾಲಿಗೆ ಗಾಯವಾಗಿ ತೀವೃ ರಕ್ತಸ್ರಾವದಿಂದ ನಿತ್ರಾಣಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಎಲ್ಲ ಘಟನೆಗಳು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.ಗ್ರಾಮ ಪಂಚಾಯತ್ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿಗಳು,ಊರಿನ ಗಣ್ಯರು ,ಸಾರ್ವಜನಿಕರರು ಅರಣ್ಯ ಇಲಾಖೆ ಜೊತೆ ಸಹಕರಿಸಿ , ಮರ್ಕಟದ ಕಾಟದಿಂದ ಮುಕ್ತಿಪಡೆಯಲು ಕಾರ್ಯಯೋಜನೆ ರೂಪಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version