ಅಂಕೋಲಾ: ತಾಲೂಕಿನ ಬೆಳಂಬಾರದ ಖಾರ್ವಿವಾಡದಲ್ಲಿರುವ ಕೊಳವೆ ಬಾವಿಗೆ ಕಿಡಿಗೇಡಿಗಳು ರೆಟಾಲ್ ಎಂಬ ಇಲಿ ವಿಷ ಬೆರೆಸಿ ವಿಕೃತಿ ಮೆರೆದಿರುವ ಘಟನೆ ನಡೆದಿದ್ದು ನೀರು ಬರದ ಕಾರಣ ಮನೆಯ ಮಾಲಿಕರು ಪರೀಕ್ಷಿಸಿದ ಸಂದರ್ಭದಲ್ಲಿ ಕೊಳವೆ ಬಾವಿ ಪೈಪಿನಲ್ಲಿ ಇಲಿ ಪಾಷಾಣದ ಟ್ಯೂಬ್ ಇರುವುದು ಕಂಡು ಬಂದಿದೆ.
ಖಾರ್ವಿವಾಡಾದ ನಿರ್ಮಲಾ ಖಾರ್ವಿ ಎನ್ನುವವರಿಗೆ ಸೇರಿದ್ದ ಮನೆಯಂಚಿನ ಹೆಂಡ ಪೈಪ್ ಮಾದರಿ ಕೊಳವೆ ಬಾವಿಗೆ ವಿಷ ಬೆರೆಸಲಾಗಿದ್ದು ಸಮೀಪದ ಅಂಗನವಾಡಿ ಕೇಂದ್ರಕ್ಕೂ ಸಹ ಇದೇ ಕೊಳವೆ ಬಾವಿಯ ನೀರು ಬಳಸುತ್ತಿದ್ದರು ಎನ್ನಲಾಗಿದ್ದು, ಈ ಅಂಗನವಾಡಿಯಲ್ಲಿ ಸುಮಾರು 40 ಪುಟ್ಟ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು ಎಂಬ ಮಾತು ಕೇಳಿ ಬಂದಿದೆ.
ವಿಷ ಸೇರ್ಪಡೆ ವಿಷಯ ಗಮನಕ್ಕೆ ಬಂದ ದಿನ ಅಂಗನವಾಡಿ ಕೇಂದ್ರಕ್ಕೆ ನೀರು ಬಳಸದೇ , ಈ ಹಿಂದೆ ಎರಡು ದಿನಗಳ ಮುಂಚೆ ಸಂಗ್ರಹಿಸಿಟ್ಟ ನೀರು ಬಳಸಲಾಗುತ್ತಿದ್ದು, ಕೇವಲ ಬಾಹ್ಯ ಬಳಕೆಗೆ ಮಾತ್ರ ಉಪಯೋಗಿಸುವುದರಿಂದ ಚಿಕ್ಕ ಮಕ್ಕಳು ಅಪಾಯಕ್ಕೆ ಸಿಲುಕುವ ಭೀತಿಯಿಂದ ಪಾರಾಗಿದ್ದಾರೆ.
ದುರುಳರ ಕೃತ್ಯಕ್ಕೆ ಕೆಲವರಿಂದ ಆಕ್ರೋಶ ವ್ಯಕ್ತವಾಗಿದ್ದು, ಘಟನೆಯಿಂದ ಆತಂಕ ಗೊಂಡ ಕೆಲ ಪಾಲಕರು ಭಯದಿಂದ ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಿಂದ ಆಗ್ರಹಗಳು ಕೇಳಿ ಬಂದಿವೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು,ಪಿ.ಡಿ.ಓಸ್ಥಳೀಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.. ಗ್ರಾಮದಲ್ಲಿ ನಡೆದ ಈ ದುಷ್ಕೃತ್ಯದ ‘ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಠರಾವು ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ಮಡಿವಾಳ ತಿಳಿಸಿದ್ದಾರೆ.
ಇಂತಹ ಘಟನೆಗಳನ್ನು ನಿರ್ಲಕ್ಷಿಸದೆ ಎಚ್ಚರಿಕೆಯೂ ಅಗತ್ಯ ಎನ್ನುತ್ತಾರೆ ಕೆಲ ತಜ್ಞರು.ಒಟ್ಟಿನಲ್ಲಿ ಯಾರದೋ ವೈಷಮ್ಯ ಇಲ್ಲವೇ ಇತರೆ ರೀತಿಯ ವಿಕೃತ ಮನಸ್ಸಿನಿಂದ ಅಮಾಯಕರು ಮಾನಸಿಕವಾಗಿಯೂ ನೊಂದು ಬಸವಳಿಯದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ