ಗುರುಪೂರ್ಣಿಮೆಯಂದು ಲೋಕಕ್ಕೆ ಅರಿವಿನ ಸಿಹಿ ಹಂಚಿದ ವೇದವ್ಯಾಸರನ್ನು ಸ್ಮರಿಸೋಣ

ಮನುಷ್ಯನಲ್ಲಿ ಜ್ಞಾನಗಳಿಕೆಯ ಹಂಬಲ, ಜ್ಞಾನ ವಿಕಾಸದ ಆಸಕ್ತಿ ಹುಟ್ಟಿನಿಂದಲೇ ಸಹಜವಗಿದೆ. ಮಾನವನಲ್ಲಿ ಈ ಜ್ಞಾನದ ಹೆಚ್ಚುಗಾರಿಕೆ ಇರುವ ಕಾರಣಕ್ಕಾಗಿಯೇ, ಉಳಿದ ಜೀವಸಮೂಹದಿಂದ ಮನುಷ್ಯನನ್ನು ಬೇರ್ಪಡಿಸಿದೆ, ಶ್ರೇಷ್ಟವಾಗಿಸಿದೆ. ಇಂತಹ ಅಪಾರ ಜ್ಞಾನರಾಶಿಯನ್ನು ಜಗತ್ತಿಗೆ ನೀಡಿದ ‘ಭಗವಾನ್ ವೇದವ್ಯಾಸ’ರ ಅಮೂಲ್ಯ, ಅಮೋಘ, ಅನನ್ಯ ಕೊಡುಗೆಗಳನ್ನು ಕೃತಜ್ಞತೆಯಿಂದ ಸ್ಮರಿಸುವ ದಿನವಾಗಿ, ಆಷಾಢ ಮಾಸ ಹುಣ್ಣಿಮೆಯಂದು ‘ಗುರುಪೂರ್ಣಿಮೆ’ ಅಥವಾ ‘ವ್ಯಾಸಪೂರ್ಣಿಮೆ’ಯಾಗಿ ಆಸ್ತಿಕರು ಭಕ್ತಿ ಶೃದ್ಧೆಯಿಂದ ಆಚರಿಸುವರು. ಅಷ್ಟೇ ಅಲ್ಲದೇ ಈ ದಿನವು ನಮಗೆ ಜ್ಞಾನ ನೀಡಿದ ಗುರುವನ್ನು ಗೌರವಿಸುವ ದಿನವೂ ಹೌದು. ನಮ್ಮ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಭಗವಂತನಿಗಿಂತ ಹೆಚ್ಚಿನ ಸ್ಥಾನಮಾನ ನಿಡಲಾಗಿದೆ. ಗುರುವಿನ ಹೊಣೆಗಾರಿಕೆ ಶಿಷ್ಯನಿಗೆ ಕೇವಲ ಮಾಹಿತಿ ನೀಡಿ ತೆರಳುವುದಲ್ಲ. ಗುರುವಿನ ಹೊಣೆಗಾರಿಕೆ ಅದಕ್ಕಿಂತ ಭಿನ್ನವಾದುದು. ಹೆಚ್ಚಿನದು, ಗುರುತರವಾದುದೇ ಆಗಿದೆ. ತನ್ನ ಶಿಷ್ಯನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿ, ಸಮಾಜಕ್ಕೆ ಸತ್ಪ್ರಜೆಯನ್ನಾಗಿ ಮಾಡುವವನೇ ನಿಜವಾದ ಗುರು ಆಗಿದ್ದಾನೆ.
ಗುರು ಎನ್ನುವುದು ಸಂಸ್ಕøತ ಪದವಾಗಿದ್ದು, ‘ದೊಡ್ಡದು’ ಎಂಬ ಅರ್ಥ ಹೊಂದಿದೆ. ಯಾರು ಜ್ಞಾನ-ಶೀಲ-ಆಚಾರ-ವಿಚಾರ-ವ್ಯಕ್ತಿತ್ವದಿಂದ ದೊಡ್ಡವನಾಗಿರುತ್ತಾನೋ ಅವನೇ ಗುರು.

ಗುರುಬ್ರ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ|
ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ||

ಗುರುವು ತ್ರಿಮೂರ್ತಿ ಸ್ವರೂಪನು. ನಮ್ಮಲ್ಲಿ ಜ್ಞಾನವನ್ನು ಬಿತ್ತುವವನು, ಪೋಷಿಸುವವನು, ಅಜ್ಞಾನವನ್ನು ಹೋಗಲಾಡಿಸುವವನು ಗುರುವಾಗಿದ್ದಾನೆ. ಗುರುವು ಸರ್ವಶಕ್ತನಾದ ಪರಬ್ರಹ್ಮ ಸ್ವರೂಪಿಯೇ ಆಗಿದ್ದಾನೆ. ಅಂತಹ ಗುರುವಿಗೆ ನಮನಗಳು ಎಂದು ಗುರುವಿನ ಮಹಿಮೆಯನ್ನು ಹೊಗಳಿದೆ. ಇದು ಗುರುವನ್ನು ಹೊಗಳಿದ್ದಲ್ಲ. ಸತ್ಯ ಸಂಗತಿ ಕೂಡ ಹೌದು. ಗುರು ಮತ್ತು ಭಗವಂತ ಇಬ್ಬರಲ್ಲಿ ಗುರುವೇ ಶ್ರೇಷ್ಠನು. ಯಾಕೆಂದರೆ ಗುರುವೇ ನಮಗೆ ಭಗವಂತನ ಅಸ್ತಿತ್ವದ ಅರಿವು ಮುಡಿಸುವವನಾಗಿದ್ದಾನೆ. ಗುರುವು ಜ್ಞಾನವನ್ನು ಹೊಂದಲು, ಭಗವಂತನನ್ನು ತಿಳಿಯಲು ಸಹಾಯ ಮಾಡುವನು.

ವ್ಯಾಸರ ಹಿರಿಮೆ –ಗರಿಮೆ:-
ಗುರುಪೂರ್ಣಿಮೆಯನ್ನು ‘ವ್ಯಾಸಪೂರ್ಣಿಮೆ’ ಎನ್ನುವುದಾಗಿ ಮತ್ತೊಂದು ಹೆಸರಿನಿಂದಲೂ ಕರೆಯುವರು. ಸತ್ಯವತಿ-ಪರಾಶರದಂಪತಿಯ ಪುತ್ರರಾದ ವ್ಯಾಸರು ಕೃಷ್ಣದ್ವೈಪಾಯನ, ಬಾದರಾಯಣ ಎಂದೂ ಖ್ಯಾತನಾಮರು. ಅಖಂಡ ವೇದರಾಶಿಯನ್ನು, ಅವುಗಳ ಗುಣಧರ್ಮಕ್ಕೆ ಅನುಗುಣವಾಗಿ, ಅಧ್ಯಯನ ಸೌಕರ್ಯಕ್ಕೋಸ್ಕರ ಋಗ್ವೇದ-ಯಜುರ್ವೇದ-ಸಾಮವೇದ-ಅಥರ್ವವೇದವೆಂದು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ್ದರಿಂದ ‘ವೇದವ್ಯಾಸ’ರಾಗಿ ಪ್ರಸಿದ್ಧಿ ಹೊಂದಿದರು. ಪಾಮರರು ವೇದವನ್ನು ಅರಿಯುವುದು ಕಷ್ಟ. ಅದಕ್ಕಾಗಿ ವೇದದ ರಹಸ್ಯ ತತ್ವಗಳನ್ನು ಜನಸಾಮಾನ್ಯರೂ ತಿಳಿಯುವುದಕ್ಕೋಸ್ಕರ, ಒಂದುಲಕ್ಷಶ್ಲೋಕಗಳಿಂದ ಕೂಡಿದ ಪಂಚಮವೇದವೆಂದೇ ಸುಪ್ರಸಿದ್ಧವಾದ ‘ಮಹಾಭಾರತ’ ಗ್ರಂಥವನ್ನು ರಚಿಸಿದರು. ಕರ್ಮ-ಭಕ್ತಿ-ಜ್ಞಾನ-ವೈರಾಗ್ಯ ಮುಂತಾದ ಮಾರ್ಗಗಳ ಮೂಲಕ ಭಗವಂತನನ್ನು ಹೊಂದುವ ಉಪಾಯವನ್ನು ಸಾರುವ ಭಾಗವತ ಮುಂತಾದ ಹದಿನೆಂಟು ಪುರಾಣ ಹಾಗೂ ಉಪಪುರಾಣಗಳನ್ನು ಬರೆದರು. ‘ಬ್ರಹ್ಮಸೂತ್ರ’ ರಚನೆಯೂ ವ್ಯಾಸರ ಶ್ರೇಷ್ಠಕೊಡುಗೆಗಲ್ಲಿ ಒಂದಾಗಿದೆ. ದ್ವೈತಾದ್ವೈತ ವಿಶಿಷ್ಟಾದ್ವೈತ ಸಿದ್ದಾಂತಿಗಳು, ತಮ್ಮ ತಮ್ಮ ಸಿದ್ಧಾಂತ ಪ್ರತಿಪಾದನೆ ಮಾಡುವುದು, ವ್ಯಾಸರು ರಚಿಸಿದ ಇದೇ ಬ್ರಹ್ಮಸೂತ್ರದ ನೆಲೆಯಲ್ಲಿಯೇ. ಅಪಾರ ಜ್ಞಾನರಾಶಿಯನ್ನು ನೀಡಿದ ವೇದವ್ಯಾಸರೇ ಗುರುವಾದರೆ ಲೋಕಕ್ಕೆ ಅಧ್ಯಾತ್ಮವಿದ್ಯೆಯನ್ನು ಬೊಧಿಸಿದ ಕೃಷ್ಣನೇ ಜಗದ್ಗುರುವಾಗಿದ್ದಾನೆ. ‘ಕೃಷ್ಣಂ ವಂದೇ ಜಗದ್ಗರುಮ್’ ಎಂದೇ ಪ್ರಸಿದ್ದ ಹೊಂದಿದೆ. ಕೃಷ್ಣನ ಉಪದೇಶವಾದ ಭಗವದ್ಗೀತೆಯನ್ನು ಒಳಗೊಂಡ ಮಹಾಭಾರತ ಗ್ರಂಥವು ಭಾರತೀಯ ಸಂಸ್ಕøತಿ-ಇತಿಹಾಸದ ಕೈಗನ್ನಡಿಯಾಗಿದೆ. ಮಹಾಭಾರತ ವಿವಿಧ ಉಪಖ್ಯಾನ(ಕಥೆ), ವಿದುರನೀತಿ ಮುಂತಾದ ಸದಾಚಾರ-ನ್ಯಾಯ-ನೀತಿ-ಮೌಲ್ಯಗಳನ್ನು ಸಾರಿವೆ. ಅವು ಇಂದಿಗೂ ಅವಿಸ್ಮರಣೀಯವಾಗಿವೆ. ವ್ಯಾಸರು ಲೋಕಕ್ಕೆ ಕೃಷ್ಣನಂತಹ ಜಗದ್ಗುರುವನ್ನು ತೋರಿಸಿಕೊಟ್ಟವರು. ವ್ಯಾಸರ ಅನೇಕ ಕೊಡುಗೆಗಳನ್ನು ಕೃತಜ್ಞತೆಯಿಂದ ಸ್ಮರಿಸುವ ದಿನವಾಗಿ ‘ವ್ಯಾಸಪೂರ್ಣಿಮೆ’ಯನ್ನು ಆಚರಿಸುವರು. ಸನ್ಯಾಸಿಗಳು ಈ ದಿನದಂದು ವ್ಯಾಸರನ್ನು ಪೂಜಿಸಿ, ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುವರು. ಗುರುವಿನ ಸ್ಥಾನದಲ್ಲಿನ ಋಷಿಮುನಿಗಳು, ಸಂತ-ಮಹಾಂತರು ಅದೆಷ್ಟೋ ವರ್ಷಗಳಿಂದ ತಮ್ಮ ಸಂಪರ್ಕಕ್ಕೆ ಬಂದವರನ್ನು ಯೋಗ್ಯ ಮಾಗದರ್ಶನಗೈದು ಉದ್ಧರಿಸಿದ್ದಾರೆ. ಅದೆಷ್ಟೋ ಜನರು ಗುರು ತೋರಿದ ಬೆಳಕಿನಲ್ಲಿ, ತಮ್ಮ ಗುರಿಯನ್ನು ತಲುಪಿದ್ದಾರೆ. ನಾವು ಅಜ್ಞಾತವಾದ ಸ್ಥಳಕ್ಕೆ ತಲುಪಬೇಕಾದರೆ, ಒಂದೇ ನಮ್ಮಲ್ಲಿ ಆ ದಾರಿಯ ಮ್ಯಾಪ್ ಇರಬೇಕು ಅಥವಾ ಯೋಗ್ಯ ಮಾರ್ಗದರ್ಶಕರಿರಬೇಕು. ಇಲ್ಲವಾದರೆ ದಾರಿ ತಿಳಿಯದೇ ಅಲ್ಲಿ ಇಲ್ಲಿ ಅಲೆಯಬೇಕಾಗುತ್ತದೆ. ಗುರಿ ತಲುಪಲಾಗದು.

ಯೋಗ್ಯ ಮಾರ್ಗದರ್ಶಕ ಗುರುವಿದ್ದರೆ ಸುಲಭವಾಗಿ ಜೀವನದ ಗುರಿಯನ್ನು ಮುಟ್ಟುವುದರಲ್ಲಿ ಅನುಮಾನವೇ ಇಲ್ಲ. ಶಿಲೆಯಂತಹ ಶಿಷ್ಯನು ಯೋಗ್ಯ ಗುರುವಿನ ಕೈಚಳಕದಿಂದ ವಿಗ್ರಹರೂಪ ಪಡೆದು, ಸರ್ವವಂದ್ಯನಾಗುವನು.
ರಾಮನು ಶಸ್ತ್ರ-ಶಾಸ್ತ್ರ ವಿದ್ಯೆಯ ಮೂಲಕ ಸರ್ವವಿಧದಲ್ಲೂ ಸಮರ್ಥನಾಗಿ ಮರ್ಯಾದಾ ಪುರುಷೋತ್ತಮನಾಗುವಲ್ಲಿ ಆತನ ಗುರು ವಸಿಷ್ಠ-ವಿಶ್ವಾಮಿತ್ರರ ಕೊಡುಗೆ ಅನನ್ಯವಾದುದು. ತನ್ನ ಲೀಲೆಯ ಮೂಲಕ ಭಕ್ತರನ್ನು ಇಂದಿಗೂ ತನ್ನತ್ತ ಸೆಳೆದ ಭಗವಂತ ಕೃಷ್ಣನಿಗೂ ಗುರು ಸಾಂದೀಪನಿಮಹರ್ಷಿಗಳ ಯೋಗ್ಯ ಮಾರ್ಗದರ್ಶನವಿತ್ತು. ಚಂದ್ರಗುಪ್ತಮೌರ್ಯನು ಭಾರತಉಪಖಂಡದ ಬಹುಭಾಗ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿ, ಭಾರತದ ಮೊದಲ ಸಾಮ್ರಾಟನಾಗುವಲ್ಲಿ ಹೆಜ್ಜೆ ಹೆಜ್ಜೆಗೆ ಆತನ ಗುರು ಚಾಣಾಕ್ಯನ ಮಾರ್ಗದರ್ಶನ, ಚಾಕಚಕ್ಯತೆ ಇದೆ. ಗ್ರೀಸ್ ದೇಶದ ಮಹಾದಂಡನಾಯಕನಾದ ‘ಅಲೆಕ್ಸಾಂಡರ್ ದಿ ಗ್ರೇಟ್’ನು ಗ್ರೀಸ್ ದೇಶದಿಂದ ಹಿಮಾಲಯ ತನಕ ಬಹುದೊಡ್ಡ ಸಾಮ್ರಾಜ್ಯ ವಿಸ್ತರಿಸಿದ್ದರ ಹಿಂದೆ ಆತನ ಗುರು ತತ್ವಜ್ಞಾನಿ ‘ಅರಿಸ್ಟಾಟಲ್’ ಇದ್ದ, ಗ್ರೀಕ್ ಸಮಾಜ ವಿಷಮ ಘಟ್ಟದಲ್ಲಿದ್ದಾಗ, ಅನೈತಿಕತೆ, ಡಂಭಾಚಾರ ಸ್ವೇಚ್ಚಾಚಾರ ಖಂಡಿಸಿ, ಆ ಕಾಲದ ಸಮಾಜಕ್ಕೆ ಆದರ್ಶದ ಬೆಳಕು ನೀಡಿದವನು, ‘ಸಾಕ್ರಟೀಸ್’ ಎಂಬ ಗುರು. ಸ್ವಾಭಿಮಾನಿ ರಾಷ್ಟ್ರನಿರ್ಮಣಕ್ಕೆ ಹೋರಾಡಿದ, ತನ್ನ ಶೌರ್ಯ ಸಾಹಸದಿಂದ ಅನೇಕ ರಾಷ್ಟ್ರಭಕ್ತ ಆಡಳಿತಗಾರರಿಗೆ ಪ್ರೇರಣೆಯಾದ ಮರಾಠಾಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜನ ಹೆಸರು ಚರಿತ್ರೆಯ ಪುಟಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತಾದದ್ದು, ಆತನ ಗುರು ಸಮರ್ಥರಾಮದಾಸರಿಂದಾಗಿ. ಬಂಗಾಳದ ನರೇಂದ್ರನಾಥದತ್ತ ತಾರುಣ್ಯದಲ್ಲೇ ಸಂನ್ಯಾಸವನ್ನು ಸ್ವೀಕರಿಸಿ, ವಿಶ್ವದ ಮಹಾನ್ ಚಿಂತಕ-ತತ್ವಜ್ಞಾನಿ, ಸ್ವಾಮಿ ವಿವೇಕಾನಂದನಾಗುವಲ್ಲಿ, ಅವರ ಪ್ರೀತಿಯ ಗುರು ರಾಮಕೃಷ್ಣ ಪರಮಹಂಸರ ಪಾತ್ರ ಸಾಕಷ್ಟಿದೆ. ಇಂತಹ ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಯೋಗ್ಯ ಮಾರ್ಗದರ್ಶಕ ಗುರುವಿದ್ದರೆ, ನಮಗೆ ಜೀವನದಲ್ಲಿ ಸುರಕ್ಷತೆಯ ಭಾವನೆ ಉಂಟಾಗುವುದು.

ಈ ಗುರು ಪೂರ್ಣಿಮೆಯನ್ನು ಬೌದ್ಧ, ಜೈನ ಸಂಪ್ರದಾಯದವರೂ ಆಚರಿಸುವರು. ಬುದ್ಧನು ಸಾರಾನಾಥದಲ್ಲಿ ಮೊದಲ ಉಪದೇಶ ನೀಡಿದ ನೆನಪಿಗಾಗಿ, ಬೌದ್ಧರು ಗುರುಪೂರ್ಣಿಮೆಯನ್ನು ಆಚರಿಸುವರು. ಜೈನ ಸಂಪ್ರದಾಯದಲ್ಲಿ ಮಳೆಗಾಲದ ನಾಲ್ಕು ತಿಂಗಳನ್ನು ‘ಚೌಮಾಸ’ ಎನ್ನುವರು. ಈ ಚೌಮಾಸ ಪ್ರಾರಂಭದ ದಿನವನ್ನೇ ಜೈನ ಸಂಪ್ರದಾಯವು ‘ಗುರುಪೂರ್ಣಿಮೆ’ಯಾಗಿ ಆಚರಿಸಿ, ಇಪ್ಪತ್ನಾಲ್ಕು ತೀರ್ಥಂಕರನ್ನು ಸ್ಮರಿಸುವರು. ಅಲ್ಲದೇ ಅನೇಕ ಸಂಘ ಸಂಸ್ಥೆಗಳೂ ಕೂಡ ಜಗತ್ತಿಗೆ ಜ್ಞಾನನಿಧಿ ನೀಡಿದ ವ್ಯಾಸರನ್ನು ಈ ‘ಗುರುಪೂರ್ಣಿಮೆ’ಯ ಮೂಲಕ ಸ್ಮರಿಸುತ್ತೇವೆ.
ಈ ‘ಗುರುಪೂರ್ಣಿಮೆ’ ಪುಣ್ಯಪರ್ವದಂದು, ತಾನು ಸ್ವತಃ ಜ್ಞಾನಿಯಾಗಿ, ನಮಗೆ ಜ್ಞಾನ ನೀಡಿದ ಗುರು-ಸದ್ಗುರುಗಳ ಕೊಡುಗೆಗಳನ್ನು ಸ್ಮರಿಸುತ್ತಾ, ಕೋಟಿ ಕೋಟಿ ನಮನಗಳ ಮೂಲಕ ಕೃತಜ್ಞತೆ ಸಲ್ಲಿಸಿ ಕೃತಾರ್ಥರಾಗೋಣ.

ಗಣೇಶ ಭಟ್ಟ
ಸಂಸ್ಕøತ ಉಪನ್ಯಾಸಕರು.
ಹನುಮಂತ ಬೆಣ್ಣೆ ಸ.ಪ.ಪೂ.ಕಾಲೇಜು ನೆಲ್ಲಿಕೇರಿ,ಕುಮಟಾ
.
[sliders_pack id=”1487″]
Exit mobile version