ಮನೆಗೆ ಮರಳಿದ ಸುಕ್ರಜ್ಜಿ: ವೈದ್ಯರಿಗೆ  ಹರಸಿದ ಜಾನಪದ ಕೋಗಿಲೆ  

ಅಂಕೋಲಾ:ಇತ್ತೀಚಿಗೆ ಕಾಣಿಸಿಕೊಂಡಿದ್ದ ಆರೋಗ್ಯ ಸಮಸ್ಯೆಯಿಂದ, ಮಂಗಳೂರಿನ ಕೆ. ಎಂ.ಸಿ. ಆಸ್ಪತ್ರೆಗೆ ದಾಖಲಾಗಿದ್ದ  ಪದ್ಮಶ್ರೀ ಪುರಸ್ಕೃತ  ಸುಕ್ರಿ ಬೊಮ್ಮ ಗೌಡ ಅವರು,ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಗೊಂಡು  ಅಂಕೋಲಾದ ಬಡಗೇರಿಯ ತಮ್ಮ ಮನೆಗೆ ಮರಳಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡ ಸುಕ್ರಜ್ಜಿ ಅವರನ್ನು, ಬಲ್ಮಟ ಸರ್ಕಲ್ ನಲ್ಲಿ ರುವ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಗೌರವಿಸಿ ಬೀಳ್ಕೊಟ್ಟರು.

ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ  ಹರಸಿದ ಸುಕ್ರಿಜ್ಜಿ ಸಂತಸದಿಂದಲೇ ಮನೆಗೆ ಮರಳಿದ್ದಾರೆ.ಕಳೆದ ಗುರುವಾರ ಸುಕ್ರಿ ಗೌಡರ ಆರೋಗ್ಯದಲ್ಲಿ ಏರು ಪೇರು ಉಂಟಾಗಿ  ಅವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು, ತಜ್ಞ ವೈದ್ಯರ ತಂಡ ಪರೀಕ್ಷೆ ನಡೆಸಿ ಸುಕ್ರಜ್ಜಿ  ಹೃದಯಕ್ಕೆ  ಸ್ಟಂಟ್ ಅಳವಡಿಸಿದ್ದರು.ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಸುಕ್ರಜ್ಜಿ ದಾಖಲಾಗಿರುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು  ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದು, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ,ಶಾಸಕಿ ರೂಪಾಲಿ ನಾಯ್ಕ,ತಹಶೀಲ್ದಾರ ಉದಯಕುಂಬಾರ ಮತ್ತಿತರರು ,ಆಗಾಗ ಸುಕ್ರಜ್ಜಿಯ ಆರೋಗ್ಯ ವಿಚಾರ ಮಾಹಿತಿ ತಿಳಿದುಕೊಂಡು ಕಾಳಜಿ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.  ಜಾನಪದ ಕೋಗಿಲೆ ಸುಕ್ರಜ್ಜಿ ಶೀಘ್ರ ಗುಣಮುಖರಾಗಿ ಮನೆಗೆ ವಾಪಸಾಗಲಿ ಎಂದು ಪ್ರಾರ್ಥಿಸಿದ್ದ ಅಸಂಖ್ಯ ಅಭಿಮಾನಿಗಳಿಗೆ ಸಂತಸವಾದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version