ಉತ್ತರಕನ್ನಡದಲ್ಲಿ ವರುಣಾರ್ಭಟ: ಗೋವಾ- ಕರ್ನಾಟಕ ರಸ್ತೆ ಸಂಪರ್ಕ ಕಡಿತ

ಕಾರವಾರ: ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಹಲವೆಡೆ ಅವಾಂತರಗಳನ್ನ ಸೃಷ್ಟಿಸಿದೆ.

ಗೋವಾ ರಾಜ್ಯದ ಗಡಿ ಭಾಗವಾದ ಜೊಯಿಡಾ ತಾಲೂಕಿನ ಅನಮೋಡ ಘಟ್ಟದ ಬಳಿ ಗುಡ್ಡ ಕುಸಿದು ಗೋವಾ- ಅನಮೋಡ ರಾಷ್ಟ್ರೀಯ ಹೆದ್ದಾರಿ ಸಂಚಾರ ಸದ್ಯ ಸ್ಥಗಿತಗೊಂಡಿದೆ. ಗೋವಾ ಗಡಿಯಲ್ಲಿ ಗುಡ್ಡ ಕುಸಿದ್ದಿದ್ದು, ಸದ್ಯ ಗುಡ್ಡ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಗುಡ್ಡ ಕುಸಿತದಿಂದಾಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಕಲ್ಲು, ಮಣ್ಣು ತುಂಬಿಕೊಂಡಿದ್ದು, ಜೆಸಿಬಿಗಳನ್ನು ಬಳಸಿ ತಡರವು ಮಾಡಲಾಗುತ್ತಿದೆ. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.

ಇದೇ ವೇಳೆ ಭಾರೀ ಮಳೆ ಮುಂದುವರಿಯುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜು.8ರವರೆಗೆ ಭಾರೀ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಭಾರೀ ಗಾಳಿ ಸಹಿತ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಿದೆ.

ಈ ಅವಧಿಯಲ್ಲಿ ಗಾಳಿಯು ಪ್ರತಿ ಗಂಟೆಗೆ 40- 50 ಕಿ.ಮೀ. ವೇಗದಲ್ಲಿ ಬೀಸಲಿದೆ ಎನ್ನಲಾಗಿದ್ದು, ಕಡಲತೀರ, ನದಿಪಾತ್ರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನಲೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಸ್ಮಯ‌ ನ್ಯೂಸ್ ಕಾರವಾರ

Exit mobile version