ಅಂಕೋಲಾ: ಜಿಂಕೆ ಕೋಡು ಮಾರಾಟದ ಮೂಲಕ ಲಕ್ಷ – ಲಕ್ಷ ದ ಡೀಲ್ ಕುದುರಿಸಿ ರೊಕ್ಕ ಎಣಿಸಲು ಕನಸು ಕಾಣುತ್ತಿದ್ದ ನಾಲ್ವರು ಖಾಕಿ ಪಡೆಯ ಖೆಡ್ಡಾಗೆ ಬಿದ್ದು ಕಂಬಿ ಎಣಿಸುವಂತಾದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಎಸ್ಪಿ ಡಾ ಸುಮನ್ ಡಿ ಪೆನ್ನೇಕರ್ ರವರ ಮಾಹಿತಿ ಆಧರಿಸಿ, ಡಿವೈಎಸ್ಪಿ ವೈಲೆಂಟನ್ ಡಿಸೋಜರವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ವಿಭಾಗದ ಪಿ ಎ ಸೈ ಪ್ರೇಮನಗೌಡ ಪಾಟೀಲ್ ಮತ್ತು ತಂಡ ಅಂಕೊಲಾ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಗಳಿಂದ ಜಿಂಕೆಯ ತಲೆಬುರುಡೆ ಸಹಿತ ಒಂದು ಕೊಂಬು ಹಾಗೂ ಪ್ರತ್ಯೇಕವಾಗಿ ಒಂದು ಬದಿಯ ಇನ್ನೊಂದು ಕೊಂಬುಗಳನ್ನು
ಮತ್ತು ಕೃತ್ಯಕ್ಕೆ ಬಳಸಿದ ಹೊಸ ಎರ್ಟಿಗಾ ವಾಹನ ( KA 30 A 4559 ) ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಂಕೋಲಾ ತಾಲೂಕಿನ ಕಲ್ಲೇಶ್ವರ ನಿವಾಸಿಗಳಾದ ಸೂರಜ ಶ್ರೀಧರ ಭಂಡಾರಿ (32) ಸಂದೀಪ ದಯಾನಂದ ಭಂಡಾರಿ(25) ಪ್ರಸಾದ ರಾಮಾ ದೇಸಾಯಿ (23) ಮತ್ತು ಹಳಿಯಾಳ ನಿವಾಸಿ ಶೌಕತ್ ಹುಸೇನ್ ಸಾಬ್ (22) ಬಂಧಿತ ಆರೋಪಿಗಳಾಗಿದ್ದು, ಇವರು ಕಲ್ಲೇಶ್ವರದಿಂದ ಹೊರಟು ರಾ.ಹೆ 63ರ ಅಂಕೋಲಾ ಯಲ್ಲಾಪುರ ಮಾರ್ಗಮಧ್ಯೆ ಮಾಸ್ತಿಕಟ್ಟ ಬಳಿ ತಾವು ತಂದಿದ್ದ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದರು.
ತಮ್ಮ ಇಲಾಖೆಯ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಯಶಸ್ವೀ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ರಾಮನಗುಳಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿತ್ತು ಎನ್ನಲಾದ ಜಿಂಕೆ ಕೊಂಬುಗಳನ್ನು ಎಲ್ಲಿಯೋ ಹುದುಗಿಸಿಟ್ಟು, ಮೂರು ವರ್ಷಗಳ ನಂತರ ಮಾರಾಟ ಮಾಡಲು ಹೋಗಿ ಲಕ್ಷ ಲಕ್ಷ ರೂಪಾಯಿ ರೊಕ್ಕ ಎಣಿಸುವ ಕನಸು ಕಂಡಿದ್ದ ಖದೀಮರೀಗ , ಖಾಕಿ ಪಡೆಯ ಕೈಗೆ ಸಿಕ್ಕಿಬಿದ್ದು ಕತ್ತಲಲ್ಲೇ ಕಂಬಿ ಎಣಿಸುವಂತಾಯಿತೇ ಎನ್ನುವ ಮಾತು ಕೇಳಿ ಬಂದಿದೆ.
ಪೋಲೀಸ ತನಿಯೆಯಿಂದ ಈ ಜಾಲದ ಕುರಿತು ಮತ್ತು ಅವರ ಕೃತ್ಯದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ದೊರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ