ಆಟೋದಲ್ಲಿ ಚಿನ್ನದ ಬ್ರೆಸ್ಲೇಟ್‌ ಬಿಟ್ಟುಹೋಗಿದ್ದ ಪ್ರಯಾಣಿಕ: ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಈತನ ಪ್ರಾಮಾಣಿಕತೆಗೊಂದು ಸಲಾಂ

ಶಿರಸಿ: ಇತರರಿಗೆ ತೊಂದರೆ ಕೊಡುವ ಹಾಗೂ ಕಳ್ಳತನ ಮಾಡುವ ಅದೆಷ್ಟೋ ಜನರ ನಡುವೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಾವಿರಾರು ಜನರನ್ನ ನಾವು ಕಾಣುತ್ತಿದ್ದೇವೆ. ಇಂತಹ ಒಂದು ಪ್ರಾಮಾಣಿಕತೆಗೆ ಸಾಕ್ಷಿಯಾದ ಘಟನೆ ಶಿರಸಿಯಲ್ಲಿ ನಡೆದಿದೆ.ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಬಂದ ಭಕ್ತನೋರ್ವ ಆಟೋದಲ್ಲಿ ಬಿಟ್ಟುಹೋದ ಬಂಗಾರದ ಆಭರಣವನ್ನು ಆಟೋಚಾಲಕ ಆ ವ್ಯಕ್ತಿಗೆ ಮರಳಿಸಿ ಪ್ರಮಾಣಿಕತೆ ಮೆರೆದು, ಗಮನ‌ಸೆಳೆದಿದ್ದಾನೆ.

ಭಟ್ಕಳ ಮೂಲದ ದೇವೇಂದ್ರ ಎಂಬಾತ ಆಟೋ ರಿಕ್ಷಾದಲ್ಲಿ ಸಂಚಾರ ಮಾಡುವಾಗ 10 ಗ್ರಾಂ ತೂಕದ ಬ್ರೆಸ್‌ಲೆಟ್ ರಿಕ್ಷಾದಲ್ಲೇ ಬಿದ್ದು ಹೋಗಿತ್ತು. ಅದನ್ನು ಲಕ್ಷಿಸದೆ ದೇವೇಂದ್ರ ಇಳಿದುಹೋಗಿದ್ದರು.ಆಟೋ ಚಾಲಕ ಭಾಸ್ಕರ ಮೊಗೇರ ಅವರು ಆ ಆಭರಣ ತನ್ನ ರಿಕ್ಷಾದಲ್ಲಿರುವುದನ್ನು ಕಂಡು ನೈತಿಕ ಪ್ರಜ್ಞೆಯಿಂದ ಮಾರಿಗುಡಿ ಪೊಲೀಸ್ ಔಟ್‌ಪೋಸ್ಟ್ ಗೆ ಬಂದು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಮರಳಿಸಿದ್ದರು.

ಬಳಿಕ ಚಿನ್ನದ ಬ್ರೆಸ್‌ಲೆಟ್ ಕಳೆದುಕೊಂಡ ದೇವೇಂದ್ರ ನಾಯ್ಕ ಭಟ್ಕಳ ಅವರಿಗೆ ಮಾಹಿತಿ ನೀಡಿ ಪೊಲೀಸರ ಸಮಕ್ಷಮ ಅದನ್ನು ಹಿಂದಿರುಗಿಸಲಾಯಿತು. ಪ್ರಾಮಾಣಿಕತೆ‌ ಮೆರೆದ ಆಟೋ ಚಾಲಕನನ್ನು ಪೊಲೀಸ್ ಇಲಾಖೆ ವತಿಯಿಂದ ಸನ್ಮಾನ ಮಾಡಲಾಯಿತು.

ವಿಸ್ಮಯ ನ್ಯೂಸ್ ಶಿರಸಿ

Exit mobile version