ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ:900 ಕ್ಕೂ ಅಧಿಕ ಪಡಿತರ ಅಕ್ಕಿಚೀಲ ವಶಕ್ಕೆ

ಸ್ಥಳದಿಂದ ಪರಾರಿಯಾದ ಆರೋಪಿಗಳು: ಸಂಗ್ರಹ ನೋಡಿ ಅಧಿಕಾರಿಗಳೇ ಶಾಕ್!

ಭಟ್ಕಳ: ಕಡಸಲಗದ್ದೆಯ ಕ್ಯಾಶ್ಯು ಗೋದಾಮನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿದ ಮಾಹಿತಿ ತಿಳಿದು ತಹಶೀಲ್ದಾರ್ ದಾಳಿ ನಡೆಸಿ 900ಕ್ಕೂ ಅಧಿಕ ಪಡಿತರ ಅಕ್ಕಿ ಚೀಲ ವಶ ಪಡಿಸಿಕೊಂಡಿದ್ದಾರೆ.

ಸಾರ್ವಜನಿಕರ ದೂರಿನ್ವಯದಂತೆ ಭಟ್ಕಳ ತಹಸೀಲ್ದಾರ ಡಾ. ಸುಮಂತ ಹಾಗೂ ನಗರ ಠಾಣೆ ಸಿಪಿಐ ದಿವಾಕರ ಹಾಗೂ ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ಅವರ ನೇತೃತ್ವದಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟ ಗೋದಾಮ ಮೇಲೆ ದಾಳಿ‌ ನಡೆಸಲಾಗಿದೆ. ಅಕ್ರಮ ಅಕ್ಕಿಯನ್ನು ತಾಲೂಕಿನ ನಾನಾ ಕಡೆಗಳಿಂದ ಜನರಿಂದ ಪಡೆದು ಸಂಗ್ರಹಿಸಿ ಕಡಸಲಗದ್ದೆಯಲ್ಲಿನ ನಿರ್ಜನ ಪ್ರದೇಶದ ಹಳೆಯ ಕ್ಯಾಶ್ಯು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪೋಲೀಸರು ಗೋದಾಮು ಒಳಗೆ ಪರಿಶೀಲಿಸಿದಾಗ ಒಂದು ಸಲಕ್ಕೆ ಹೌಹಾರಿದ್ದಾರೆ. ಗೋದಾಮಿನೊಳಗೆ ಅಂದಾಜು 900ಕ್ಕೂ ಅಧಿಕ ಚೀಲದಲ್ಲಿ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿ ಮೇಲ್ನೋಟಕ್ಕೆ ತಿಳಿದು ಬಂದಿದೆ.

ಗೋದಾಮಿನಲ್ಲಿ ನಾನಾ ಕಡೆಯಿಂದ ಸಂಗ್ರಹಿಸಿದ ಅಕ್ಕಿಯನ್ನು ಸಿಮೆಂಟ್ ಚೀಲದಲ್ಲಿ ತುಂಬಿಸಿ ಯಂತ್ರದಿಂದ ಚೀಲವನ್ನು ಹೊಲಿಗೆ ಮಾಡಿರುವುದು ಕಂಡು ಬಂದಿದೆ. ಹಾಗೂ ಸಾಕಷ್ಟು ಗೋಣಿ ಚೀಲಗಳನ್ನು ಸಹ ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ.

ಸದ್ಯ ಗೋದಾಮು ಸಹಿತ 900ಕ್ಕೂ ಅಧಿಕ ಅಕ್ಕಿ ಚೀಲ ಹಾಗೂ ಚೀಲ ಹೊಲಿಯುವ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಅಕ್ಕಿ ಸಂಗ್ರಹಿಸಿಟ್ಟ ಆರೋಪಿಗಳು ಮಾಹಿತಿ ತಿಳಿದು ಸ್ಥಳದಿಂದ ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಕಾರ್ಯ ಇನ್ನಷ್ಟೇ ನಡೆಯಬೇಕಾಗಿದೆ.

ಸ್ಥಳದಲ್ಲಿ ಆಹಾರ ನಿರೀಕ್ಷಕ ಪಾಂಡು ನಾಯ್ಕ, ಕಂದಾಯ ನಿರೀಕ್ಷಕ ವಿಶ್ವನಾಥ ಗಾಂವಕರ್, ಗ್ರಾಮೀಣ ಠಾಣೆ ಪಿಎಸ್ಐ ಭರತಕುಮಾರ, ನಗರ ಠಾಣೆ ಪಿಎಸ್ಐಗಳಾದ ಸುಮಾ ಬಿ., ಹೆಚ್ ಕುಡಗುಂಟಿ ಹಾಗೂ ಸಿಬ್ಬಂದಿಗಳು ಇದ್ದರು.

ವಿಸ್ಮಯ ನ್ಯೂಸ್‌ ಉದಯ್ ಎಸ್ ನಾಯ್ಕ ಭಟ್ಕಳ

Exit mobile version