Focus News
Trending

ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ: ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿ, ಬಹುಮಾನ ವಿತರಣೆ

ಕುಮಟಾ: ಶ್ರೀ ಜಿ ಎನ್ ಹೆಗಡೆ ಟ್ರಸ್ಟ್ (ರಿ.), ಕುಮಟಾದ ರೂವಾರಿಗಳೂ, ಜಿಲ್ಲೆಯ ಪ್ರಸಿದ್ಧ ಸ್ತ್ರೀರೋಗ ತಜ್ಞರೂ ಆದ ಡಾ|| ಜಿ ಜಿ ಹೆಗಡೆ ಅವರ ನೇತ್ರತ್ವದಲ್ಲಿ ಕುಮಟಾದ ಗೋರೆ ಪರ್ವತದ ಅಪ್ಯಾಯಮಾನವಾದ ಪ್ರದೇಶದಲ್ಲಿ ರೂಪುಗೊಂಡಿರುವ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು ವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಯುತರು, “ಭಾರತೀಯರಾದ ನಾವು ಇಂದು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸೇರಿದ್ದೇವೆ. ಭಾರತದ ಸ್ವಾತಂತ್ರ್ಯ ದಿನವು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮಹತ್ವದ ದಿನವಾಗಿದೆ. ಇಂದು ಭಾರತದಲ್ಲಿ ಸ್ವಾತಂತ್ರ್ಯ ದಿನ ಮತ್ತು ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. 1947 ಆಗಸ್ಟ್ 15 ರಂದು ಬ್ರಿಟಿಷರ ಕಪಿಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಇಂದು ನಾವು ಮೊದಲು ಈ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಎಲ್ಲವನ್ನೂ ಪಣಕ್ಕಿಟ್ಟ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಿಗೆ ನಮಸ್ಕರಿಸಬೇಕಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದಿವೆ. ಭಾರತ ದೇಶವು ಎಲ್ಲ ಕ್ಷೇತ್ರಗಳಲ್ಲಿ ಪ್ರಪಂಚದಾದ್ಯಂತ ತನ್ನ ಛಾಪು ಮೂಡಿಸಿದೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ರಂಗಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಪರಮಾಣು ಸಾಮರ್ಥ್ಯದ ದೇಶವಾಗಿರುವ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಚಂದ್ರಯಾನ-2ರ ಯಶಸ್ಸು ಇದಕ್ಕೆ ದೊಡ್ಡ ನಿದರ್ಶನ. ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಸಾಕಷ್ಟು ಮುನ್ನಡೆ ಸಾಧಿಸಿದೆ.

ಜಗತ್ತು ಭಾರತದತ್ತ ನೋಡುತ್ತಿದೆ. ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದರೂ ಇಂದು ಭಾರತವು ಅಪರಾಧ, ಭ್ರಷ್ಟಾಚಾರ, ಹಿಂಸೆ, ನಕ್ಸಲಿಸಂ, ಭಯೋತ್ಪಾದನೆ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ ಎಂಬುದಂತೂ ಅಕ್ಷರಶಃ ಸತ್ಯ. ನಾವೆಲ್ಲರೂ ಒಗ್ಗಟ್ಟಾಗಿ ಈ ಸಮಸ್ಯೆಗಳನ್ನು ಕೊನೆಗೊಳಿಸಲು ಪ್ರಯತ್ನಿಸಬೇಕು. ಭಾರತವನ್ನು ಈ ಸಮಸ್ಯೆಗಳಿಂದ ಹೊರತರುವವರೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗುವುದಿಲ್ಲ. ಒಗ್ಗಟ್ಟಿನ ಪ್ರಯತ್ನಗಳು ಉತ್ತಮ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಕಾರಣವಾಗುತ್ತವೆ” ಎಂದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ನ್ಯೂಸ್ ನ ಉತ್ತರ ಕನ್ನಡ ಜಿಲ್ಲಾ ಮುಖ್ಯ ವರದಿಗಾರರಾದ ಶ್ರೀ ಸುಭಾಶ್ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶ್ರೀ ಜಿ ಎನ್ ಹೆಗಡೆ ಟ್ರಸ್ಟ್ ಪ್ರಾಯೋಕತ್ವದಲ್ಲಿ ಏರ್ಪಡಿಸಿದ್ದ ಕುಮಟಾ ತಾಲ್ಲೂಕಾ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿ, ಬಹುಮಾನವನ್ನು ವಿತರಿಸಿದರು.

ಮುಂದುವರೆದು ಎಲ್ಲ ವಿಜೇತರಿಗೆ ಮತ್ತು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸ್ಪರ್ಧೆಯ ಪ್ರಥಮ ಸ್ಥಾನವನ್ನು ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಜ್ಯೋತಿ ಲಿಂಗಪ್ಪ ಪಟಗಾರ, ದ್ವಿತೀಯ ಸ್ಥಾನವನ್ನು ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಅಕ್ಷತಾ ವಿ ಶಾನಭಾಗ್, ತೃತೀಯ ಸ್ಥಾನವನ್ನು ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪೂಜಾ ಶಂಭು ಅವಧಾನಿ ಇವರು ಪಡೆದರು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ಕುಮಾರಿ ಸಿಂಧು ಹೆಗಡೆ ಮತ್ತು ಬಳಗದವರು ದೇಶಭಕ್ತಿ ಗೀತೆಯನ್ನು ಹಾಡಿದರು. ಕುಮಾರಿ ಮೇಧಿನಿ ಕಿರಣ್ ಭಟ್ ಮತ್ತು ಕುಮಾರಿ ಪೂಜಾ ಶಂಭು ಅವಧಾನಿ ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಥಮ ಪಿಯು ವಿಜ್ಞಾನ ವಿಭಾಗದ ಕುಮಾರಿ ಪೃಥ್ವಿ ಹೆಗಡೆ ಮತ್ತು ಬಳಗದವರು, ದ್ವಿತೀಯ ಪಿಯು ವಾಣಿಜ್ಯ-ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಂದ ರಾಷ್ಟ್ರಪ್ರೇಮದ ಗೀತಗಾಯನಗಳು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದವು.

ಈ ಸಂದರ್ಭದಲ್ಲಿ ಕೆನರಾ ಹೆಲ್ತ್ ಕೇರ್ ಸೆಂಟರ್, ಕುಮಟಾದ ತಜ್ಞ ವೈದ್ಯರುಗಳಾದ ಜನರಲ್ ಸರ್ಜನ್ ಡಾ|| ಸಚಿನ್ ನಾಯಕ್, ಡಾ|| ಪ್ರಕಾಶ್ ಭಟ್, ಶಿಕ್ಷಣ ಪ್ರೇಮಿಗಳಾದ ಶ್ರೀಮತಿ ಚೈತ್ರಾ ಹೆಗಡೆ, ಸಂಜಯ್, ಸಂಕಲ್ಪ, ವಿಜಯವಾಣಿ ಪತ್ರಿಕೆಯ ಕುಮಟಾದ ವರದಿಗಾರರಾದ ಶ್ರೀ ಶಂಕರ ಶರ್ಮ, ಸಂಸ್ಥೆಯ ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಡಿ ಎನ್ ಭಟ್ ಅತಿಥಿಗಳನ್ನು ಸಭೆಗೆ ಸ್ವಾಗತಿಸಿ, ಪರಿಚಯಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕ ಶ್ರೀ ಈಶ್ವರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಕುಮಾರಿ ಹರ್ಷಿತಾ ಎಸ್ ವಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.

ವಿಸ್ಮಯ ನ್ಯೂಸ್ ಕುಮಟಾ

Back to top button