ಆಟದ ಮೈದಾನದಲ್ಲಿ ನಡೆಯಿತೇ ನವಜಾತ ಶಿಶುವಿನ ಮಾರಾಟ| ಬಡತನವೆಂದು ಲಕ್ಷ – ಲಕ್ಷದ ಡೀಲ್ ಗೆ ಕೈಚಾಚಿದರೂ ನಂತರ ಚುರ್ ಎಂದ ತಾಯಿ ಕರಳು |ಸರ್ಕಾರಿ ಆಸ್ಪತ್ರೆ ನರ್ಸಮ್ಮನ ಮೇಲೂ ಕೇಸು ದಾಖಲು ?

ಅಂಕೋಲಾ: ಬಡತನದ ಕಾರಣದಿಂದ ಮಹಿಳೆಯೋರ್ವಳು ತನ್ನ ನವಜಾತ ಶಿಶುವನ್ನೇ ಸರ್ಕಾರಿ ಆಸ್ಪತ್ರೆಯ ನರ್ಸ್ ಸಹಾಯದಿಂದ ಹಣ ಪಡೆದು ಬೇರೆಯವರಿಗೆ ಸಾಕಲು ನೀಡಿ ನಂತರ ತನ್ನ ಮಗು ತನಗೆ ಕೊಡಿಸಿ ಎಂದು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಮನವಿ ಮಾಡಿದ ಅಪರೂಪದ ಮತ್ತು ಮನಕಲುಕುವ ಘಟನೆ ಅಂಕೋಲಾದಲ್ಲಿ ನಡಿದಿದೆ. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಗ್ರಸಂಘಟನೆ ಜೊತೆ ಸಂಪರ್ಕ? ಶಿರಸಿಯಲ್ಲಿ NIA ದಾಳಿ: SDPI ಮುಖಂಡನ ಬಂಧನ

ಪಟ್ಟಣದ ಅಜ್ಜಿಕಟ್ಟಾದ 35 ವಯಸ್ಸಿನ ಮಹಿಳೆ ಸೆಪ್ಟೆಂಬರ್ 5 ರಂದು ಕಾರವಾರ ಸಿವಿಲ್ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಬಡತನದ ಕಾರಣ ನನ್ನ ಮಗುವಿಗೆ ಸಾಕಲು ಸಾಧ್ಯವಿಲ್ಲ. ಯಾರಾದರೂ ಹಣ ಕೊಟ್ಟರೆ ನಾನು ಅವರಿಗೆ ಸಾಕಲು ಕೊಡುವುದಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರಿಗೆ ತಿಳಿಸಿದ್ದಳು ಎನ್ನಲಾಗಿದೆ.

ನರ್ಸ್ ಈ ವಿಷಯವನ್ನು ಭಟ್ಕಳದ ವ್ಯಕ್ತಿಯೋರ್ವರಿಗೆ ತಿಳಿಸಿ ಡೀಲ್ ಕುದುರಿತ್ತು ಎನ್ನಲಾಗಿದೆ. ಸೆಪ್ಟೆಂಬರ್ 15 ರಂದು ಅಂಕೋಲಾ ಬಸ್ ನಿಲ್ದಾಣದ ಹತ್ತಿರವಿರುವ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಭಟ್ಕಳದ ವ್ಯಕ್ತಿಯಿಂದ 1 ಲಕ್ಷ ರೂಪಾಯಿ ನಗದು ಮತ್ತು 70 ಸಾವಿರ ರೂಪಾಯಿ ಚೆಕ್ ಪಡೆದು ಮಗುವನ್ನು (ಸಾಕಲು ) ಮಾರಾಟ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ನಂತರದ ಕೆಲ ದಿನಗಳಲ್ಲಿಯೇ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಬಂದ ಮಗುವಿನ ತಾಯಿ ನಡೆದ ವಿಷಯವನ್ನು ತಿಳಿಸಿ ತನ್ನ ಮಗುವನ್ನು ತನಗೆ ವಾಪಸ್ ಕೊಡಿಸುವಂತೆ ಕಣ್ಣೀರಿಟ್ಟು ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.

ಪ್ರಭಾರ ಸಿ.ಡಿ.ಪಿ.ಓ ಸವಿತಾ ಸಿದ್ಧಯ್ಯ ಶಾಸ್ತ್ರಿಮಠ ಎನ್ನುವವರು ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು ಅಂಕೋಲಾ ಪೊಲೀಸರು ಮಗುವಿನ ತಾಯಿ ಅಂಕೋಲಾ ತಾಲೂಕಿನ ಅಜ್ಜಿಕಟ್ಟಾದ ಮಹಿಳೆ , ಮಗುವನ್ನು ಕಾನೂನು ಬಾಹೀರವಾಗಿ ಹಣಕೊಟ್ಟು ಸಾಕಲು ಪಡೆದ ಭಟ್ಕಳದ ವ್ಯಕ್ತಿ ಮತ್ತು , ನವಜಾತ ಶಿಶುವಿನ ಮಾರಾಟ ಮಾಡಿದ ಮಹಿಳೆ ಮತ್ತು ಖರೀದಿಸಿದ ಭಟ್ಕಳದ ವ್ಯಕ್ತಿ ನಡುವೆ ಕೊಂಡಿ ಆಗಿದ್ದಳೆನ್ನಲಾದ ಕಾರವಾರ ಸಿವಿಲ್ ಆಸ್ಪತ್ರೆ ನರ್ಸ್ ಓರ್ವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version