ಅಂಕೋಲಾ: ತೆಂಗಿನ ಕಾಯಿ ಕೊಯ್ಯಲು ತೆಂಗಿನ ಮರ ಹತ್ತಿದ ಕೃಷಿ ಕೆಲಸಗಾರ ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು ಮೃತ ಪಟ್ಟಿರುವ ಘಟನೆ ತಾಲೂಕಿನ ದೊಡ್ಡ ಅಲಗೇರಿ ಗ್ರಾಮದಲ್ಲಿ ನಡೆದಿದೆ. ದೊಡ್ಡ ಅಲಗೇರಿ ನಿವಾಸಿ ನಾರಾಯಣ ತಾಕು ನಾಯ್ಕ (33) ಮೃತ ದುರ್ದೈವಿಯಾಗಿದ್ದು ತೆಂಗಿನ ಕಾಯಿ ಕೊಯ್ಯುವ ಕೆಲಸ ಮಾಡುತ್ತಿದ್ದ.
ಬೈಕ್ ಸವಾರರ ಮೇಲೆ ದಾಳಿ ಮಾಡಿದ ಚಿರತೆ: ಸಾರ್ವಜನಿಕರಲ್ಲಿ ಭಯ
ಈತ ದೊಡ್ಡ ಅಲಗೇರಿ ಗ್ರಾಮದ ಸುಭಾಷ ತಾಮ್ಸೆ ಎನ್ನುವವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಯಲು ಅಗತ್ಯ ಸುರಕ್ಷತಾ ಸಲಕರಣೆಗಳೊಂದಿಗೆ ಮರ ಹತ್ತಿ ತೆಂಗಿನ ಕಾಯಿ ತೆಗೆಯುತ್ತಿದ್ದಾಗ ಮರದಿಂದ ಕೆಳಗೆ ಬಿದ್ದು ಕೈ ಕಾಲು ಮತ್ತಿತರ ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡವನಿಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಮೃತ ಪಟ್ಟ ಕುರಿತು ಖಚಿತಪಡಿಸಿದರು ಎಂದು ತಿಳಿದು ಬಂದಿದೆ.
ಈ ಕುರಿತು ಮೃತನ ತಾಯಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ತನ್ನ ದಿನನಿತ್ಯದ ಕಷ್ಟದ ದುಡಿಮೆ ಮೂಲಕ ಸಂಸಾರಕ್ಕೆ ಆಸರೆಯಾಗಿದ್ದ ಈತ 3 ಮಕ್ಕಳ ತಂದೆಯಾಗಿದ್ದು, ಮನೆಯ ಯಜಮಾನನಿಲ್ಲದೇ ಕಂಗಾಲಾದ ಬಡ ಕುಟುಂಬಕ್ಕೆ ಸರ್ಕಾರ ಯೋಗ್ಯ ಪರಿಹಾರ ಒದಗಿಸಬೇಕು ಮತ್ತು ಸಂಘ ಸಂಸ್ಥೆಗಳು , ಇತರೆ ದಾನಿಗಳು ಸಹಾಯ ಹಸ್ತ ಚಾಚುವಂತೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಹರೀಶ್ ಮತ್ತಿತರರು ಬಡ ಕುಟುಂಬದ ಪರವಾಗಿ ವಿನಂತಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ